×
Ad

ಪೇಶ್ವೆಗಳಿಗಿಂತಲೂ ಘೋರವಾಗಿದೆ ಬಿಜೆಪಿ ಆಡಳಿತ ವ್ಯವಸ್ಥೆ: ಜ್ಞಾನಪ್ರಕಾಶ್ ಸ್ವಾಮೀಜಿ

Update: 2017-10-25 20:59 IST

ಬೆಂಗಳೂರು, ಅ.25: ದಲಿತನೊಬ್ಬ ವಾಚ್ ಕಟ್ಟಿದರೆ ಕೈಯನ್ನೇ ಕಡಿಯಲಾಗುತ್ತಿದೆ. ಮೀಸೆ ಬಿಟ್ಟರೆ ಬೆನ್ನಿಗೆ ಚೂರಿ ಹಾಕುವಂತಹ ಪರಿಸ್ಥಿತಿಯನ್ನು ಗಮನಿಸಿದರೆ ದೇಶದಲ್ಲಿ ಪೇಶ್ವೆಗಳಿಗಿಂತಲೂ ಬಿಜೆಪಿ ಆಡಳಿತ ವ್ಯವಸ್ಥೆ ಅತ್ಯಂತ ಘೋರವಾಗಿದೆ ಎಂದು ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.

ಬುಧವಾರ ಸಮೃದ್ಧಿ ಎಜುಕೇಷನಲ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ನಗರದ ಎನ್‌ಜಿಒ ಸಭಾಂಗಣದಲ್ಲಿ ಆಯೋಜಿಸಿದ್ದ ಲೇಖಕ ಮದನ್ ಪಟೇಲ್‌ರವರ ‘ತಮಟೆ ಸಮಾಜದ ದನಿ’ ಕಾದಂಬರಿಯ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಬಡವರು, ದಲಿತರು, ಹಿಂದುಳಿದವರು ಸೇರಿದಂತೆ ಸಾಮಾನ್ಯ ಜನತೆ ಸಹಜವಾಗಿ, ತಮ್ಮ ಸ್ವ ಇಚ್ಛೆಗೆ ಅನುಗುಣವಾಗಿ ಬದುಕುವುದೇ ದೊಡ್ಡ ಸವಾಲಿನ ಸಂಗತಿಯಾಗಿದೆ ಎಂದು ವಿಷಾದಿಸಿದರು.

ದೇಶದಲ್ಲಿ ದಲಿತ ಸಮುದಾಯ ಮೇಲೆ ಹಲ್ಲೆಗಳು ನಿರಂತರವಾಗಿದೆ. ದಲಿತ ಮಹಿಳೆಯರ ಮೇಲಿನ ಅತ್ಯಾಚಾರಗಳು ಯಥಾಪ್ರಕಾರ ಮುಂದುವರೆದಿದೆ. ಈ ಘಟನೆಗಳ ಕುರಿತು ಬಾಯಿ ಬಿಡದ ಪ್ರಧಾನಿ ಮೋದಿ ನಗದು ರಹಿತ ಸಮಾಜವನ್ನು ನಿರ್ಮಿಸಲು ಉತ್ಸಾಹ ತೋರಿಸುತ್ತಾರೆಯೇ ವಿನಃ ಜಾತಿ ರಹಿತ ಸಮಾಜದ ಕುರಿತು ಯಾವುದೇ ಕಾರ್ಯಕ್ರಮಗಳಿಲ್ಲ ಎಂದು ಕಿಡಿಕಾರಿದರು.

ಚರ್ಮ ಸಂಸ್ಕೃತಿ: ದ್ರಾವಿಡ ಸಮುದಾಯದ್ದು ಚರ್ಮ ಸಂಸ್ಕೃತಿ. ಚರ್ಮವೊಂದು ಕಲೆಯಾಗಿಯೂ, ಸಂಸ್ಕೃತಿಯಾಗಿಯೂ, ಬದುಕಾಗಿಯೂ ರೂಪಗೊಂಡಿದೆ. ದೇವರ ಉತ್ಸವಗಳಲ್ಲಿ ಚರ್ಮ ವಾದ್ಯಗಳು ಬಹುಮುಖ್ಯ ಭಾಗವಾಗಿದ್ದವು. ಚರ್ಮದ ತಮಟೆಗಳನ್ನು ಬಾರಿಸದೆ ಉತ್ಸವಗಳು ಪ್ರಾರಂಭವಾಗುವುದೇ ಇಲ್ಲವೆಂದು ಹೇಳಿದರು.

ಕೃತಿಕಾರ ಮದನ್‌ ಪಟೇಲ್ ಮಾತನಾಡಿ, ನಾನು ಬರೆದಿರುವ ‘ತಮಟೆ ಸಮಾಜದ ದನಿ’ ಕಾದಂಬರಿಯಲ್ಲಿ ತಮಟೆ ಬಾರಿಸುವ ದಲಿತನೊಬ್ಬನನ್ನು ಸಮಾಜ ಹೇಗೆ ನಡೆಸಿಕೊಳ್ಳುತ್ತದೆ. ಹಾಗೂ ಆತನ ತವಕ, ತಲ್ಲಣಗಳನ್ನು ದಾಖಲಿಸಿದ್ದೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಹಿರಿಯ ಕವಿ ಸಿದ್ದಲಿಂಗಯ್ಯ, ಕತೆಗಾರ ಕುಂ.ವೀರಭದ್ರಪ್ಪ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News