×
Ad

ನ್ಯಾ.ರತ್ನಕಲಾ ಮುಂದೆ ಮನವಿ ಮಾಡಿಕೊಳ್ಳಲು ಹೈಕೋರ್ಟ್ ಸೂಚನೆ

Update: 2017-10-25 21:09 IST

ಬೆಂಗಳೂರು, ಅ.25: ಜಂತಕಲ್ ಮೈನಿಂಗ್ ಗುತ್ತಿಗೆ ನವೀಕರಣ ಪ್ರಕರಣ ಸಂಬಂಧ ಪ್ರತೀ ಹದಿನೈದು ದಿನಕ್ಕೊಮ್ಮೆ ತನಿಖಾಧಿಕಾರಿ ಎದುರು ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಹಾಜರಾತಿಗೆ ರಿಯಾಯಿತಿ ನೀಡಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್, ಈ ಮೊದಲು ವಿಚಾರಣೆಗೆ ಹಾಜರಾಗಲು ಸೂಚಿಸಿದ್ದ ನ್ಯಾಯಮೂರ್ತಿ ರತ್ನಕಲಾ ಅವರ ಮುಂದೆಯೇ ವೀಡಿಯೊ ಕಾನ್ಫರೆನ್ಸ್ ಮೂಲಕ ಮನವಿ ಮಾಡಿಕೊಳ್ಳಲು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದೆ.

ಎಚ್.ಡಿ.ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಹಸ್ಮತ್ ಪಾಷಾ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಎಸ್‌ಐಟಿ ಮುಂದೆ ಹದಿನೈದು ದಿನಕ್ಕೊಮ್ಮೆ ವಿಚಾರಣೆಗೆ ಹಾಜರಾಗಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಹಾಜರಾತಿಗೆ ರಿಯಾಯಿತಿ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಸುಪ್ರೀಂಕೋರ್ಟ್ ಆದೇಶದಂತೆ ಅಕ್ರಮ ಗಣಿಗಾರಿಕೆ ತನಿಖೆ ನಡೆಸುತ್ತಿರುವ ಎಸ್‌ಐಟಿ ಕುಮಾರಸ್ವಾಮಿ ವಿರುದ್ಧ ಜಂತಕಲ್ ಮೈನಿಂಗ್ ಕಂಪೆನಿಗೆ ಪರವಾನಗಿ ಕೊಡಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿತ್ತು. ಅಲ್ಲದೇ, 150 ಕೋಟಿ ರೂ. ಗಣಿ ಲಂಚ ಸ್ವೀಕರಿಸಿರುವುದಾಗಿ ಆರೋಪಿಸಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಎಸ್‌ಐಟಿಗೆ ಸಾಕ್ಷ್ಯಾಧಾರಗಳನ್ನೂ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News