ಪೌರ ಕಾರ್ಮಿಕ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಖಂಡಿಸಿ ಪ್ರತಿಭಟನೆ
ಬೆಂಗಳೂರು, ಅ. 25: ಪೌರ ಕಾರ್ಮಿಕ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಮತ್ತು ಜಾತಿ ದೌರ್ಜನ್ಯವನ್ನು ಖಂಡಿಸಿ ಎಐಸಿಸಿಟಿಯು ನೇತೃತ್ವದಲ್ಲಿ ಗುತ್ತಿಗೆ ಪೌರ ಕಾರ್ಮಿಕರು ಇಲ್ಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಇಲ್ಲಿನ ಪಾಲಿಕೆ ಕೇಂದ್ರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಪೌರ ಕಾರ್ಮಿಕರು, ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ, ರಾಜ್ಯ ಸರಕಾರದ ಅಧಿಸೂಚನೆ ಅನ್ವಯ ಪೌರ ಕಾರ್ಮಿಕರಿಗೆ ನೇರ ವೇತನ ಪಾವತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಅಧಿನಿಯಮ-2013ನ್ನು ಜಾರಿಗೆ ತರಬೇಕು, ಗುತ್ತಿಗೆ ಪೌರಕಾರ್ಮಿಕರಿಗೆ ಕಿರುಕುಳ ಮುಕ್ತ ಸುರಕ್ಷಿತ ವಾತಾವರಣ ನೀಡಬೇಕು. ದಾಖಲಿಸುವ ದೂರಿನ ಬಗ್ಗೆ ತನಿಖೆ ನಡೆಸಿ ಆರೋಪಿ ಗುತ್ತಿಗೆದಾರರ ಮೇಲೆ ಹಾಗು ಅಧಿಕಾರಿಗಳ ಮೇಲೆ ಕಠಿಣ ಕ್ರಮ ತಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಗುತ್ತಿಗೆದಾರನ ವರ್ಕ್ ಆರ್ಡರ್ ಅನ್ನು ಕೂಡಲೇ ರದ್ದು ಮಾಡಿ, ಆತನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಪ್ರಕರಣದ ತ್ವರಿತ ತನಿಖೆ ನಡೆಸಿ, ಆರೊಪಿಗಳನ್ನು ಬಂಧಿಸಬೇಕು. ಪೌರ ಕಾರ್ಮಿಕರಿಗೆ ಸೇರಬೇಕಾದ ಬಾಕಿ ವೇತನವನ್ನು ಕೂಡಲೇ ನೀಡಬೇಕು. ಕ್ರಿಮಿನಲ್ ಹಿನ್ನೆಲೆ ಇರುವ ನಾಗೇಶ ಅವರನ್ನು ಬಿಬಿಎಂಪಿ ಹೇಗೆ ಗುತ್ತಿಗೆದಾರನನ್ನಾಗಿ ಆಯ್ಕೆ ಮಾಡಿದರು ಎಂಬುದುರ ಬಗ್ಗೆ ತನಿಖೆ ಆಗಬೇಕು. ಪೌರಕಾರ್ಮಿಕರಿಗೆ ಆಗಿರುವ ಅನ್ಯಾಯ, ಅವಮಾನ ಹಾಗು ನೋವಿಗೆ ಬಿಬಿಎಂಪಿ ಸಾರ್ವಜನಿಕ ಕ್ಷಮೆಯಾಚಿಸಬೇಕು. ಎಸ್ಮಾ ಅಧಿಸೂಚನೆ ಕೂಡಲೇ ಹಿಂಪಡೆಯಬೇಕು. ಕಾರ್ಮಿಕರಿಗೆ ವಾರದ ರಜೆ, ಹಬ್ಬದ ರಜೆ ಹಾಗೂ ರಾಷ್ಟ್ರಿಯ ಹಬ್ಬಗಳ ರಜೆಯ ಅಧಿಸೂಚನೆಯನ್ನು ಕೂಡಲೆ ಜಾರಿಗೊಳಿಸಿ, ಗುತ್ತಿಗೆದಾರರು ಪೌರಕಾರ್ಮಿಕರನ್ನು ಬೆದರಿಸಿದಕ್ಕೆ ಹಾಗೂ ನಗರದ ಕಸ ವಿಲೇವಾರಿ ವ್ಯವಸ್ಥೆಗೆ ಹಾನಿ ಮಾಡಿದಕ್ಕೆ, ಅವರ ಮೇಲೆ ಕ್ರಮ ತೆಗೆದುಕೊಂಡು, ಹೆಚ್ಚಿನ ದಂಡವನ್ನು ವಿಧಿಸಬೇಕು. ಪೌರಕಾರ್ಮಿಕರಿಗೆ ಕೆಲಸ ಮಾಡುವುದಕ್ಕೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಲಾಗಿದೆ.