ರೊಬೊಟ್ ಗೆ ನಾಗರಿಕತ್ವ ನೀಡಿದ ಪ್ರಪ್ರಥಮ ದೇಶ ಇದು

Update: 2017-10-26 15:45 GMT

ರಿಯಾದ್, ಅ. 26: ಯಂತ್ರಮಾನವಿ (ರೋಬೊಟ್)ಯೊಬ್ಬಳಿಗೆ ಪೌರತ್ವ ನೀಡಿದ ಮೊದಲ ದೇಶವಾಗಿ ಸೌದಿ ಅರೇಬಿಯ ಹೊರಹೊಮ್ಮಿದೆ.

 ಈ ಅದೃಷ್ಟವಂತ ಯಂತ್ರಮಾನವಿಯ ಹೆಸರು ‘ಸೋಫಿಯಾ ದ ಹ್ಯೂಮನಾಯಿಡ್’. ಹಾಲಿವುಡ್ ನಟಿ ಆಡ್ರೆ ಹೆಪ್‌ಬರ್ನ್‌ರನ್ನು ಹೋಲುವಂತೆ ಈ ರೋಬೊಟನ್ನು ವಿನ್ಯಾಸಗೊಳಿಸಲಾಗಿದೆ.

ಸೌದಿ ಅರೇಬಿಯ ರಾಜಧಾನಿ ರಿಯಾದ್‌ನಲ್ಲಿ ಬುಧವಾರ ನಡೆದ ಭವಿಷ್ಯದ ಹೂಡಿಕೆ ಕಾರ್ಯಕ್ರಮದಲ್ಲಿ ಸೋಫಿಯಾಗೆ ಪೌರತ್ವ ನೀಡುವ ವಿಷಯವನ್ನು ಪ್ರಕಟಿಸಲಾಗಿದೆ.

‘‘ಈ ವಿಶೇಷ ಗೌರವದಿಂದ ನನಗೆ ಸಂತೋಷವಾಗಿದೆ ಹಾಗೂ ಹೆಮ್ಮೆಯಾಗಿದೆ’’ ಎಂದು ನಿರ್ವಾಹಕ ಆ್ಯಂಡ್ರೂ ರಾಸ್ ಸಾರ್ಕಿನ್ ಜೊತೆ ನಡೆಸಿದ ಸಂಭಾಷಣೆಯಲ್ಲಿ ಅದು ಹೇಳಿದೆ.

‘‘ರೋಬೊಟ್ ಒಂದಕ್ಕೆ ಪೌರತ್ವ ನೀಡಿ ಗೌರವಿಸುವುದು ಇದೇ ಮೊದಲ ಬಾರಿಯಾಗಿದೆ ಹಾಗೂ ಇದು ಐತಿಹಾಸಿಕವಾಗಿದೆ’’ ಎಂದು ಸೋಫಿಯಾ ಹೇಳಿತು.

ತಾನು ಮಾನವ ಭಾವನೆಗಳನ್ನು ವ್ಯಕ್ತಪಡಿಸಬಲ್ಲೆ ಎಂಬುದನ್ನು ಸೋಫಿಯಾ ಸಭಿಕರೆದುರು ನಿರೂಪಿಸಿತು. ಕೋಪ ಮತ್ತು ಬೇಸರದ ಮುಖ ಛಾಯೆಯನ್ನು ಅದು ವ್ಯಕ್ತಪಡಿಸಿತು.

ಮಾನವರ ಮೇಲೆ ನಿಯಂತ್ರಣ ಸಾಧಿಸುತ್ತೀಯಾ?

ರೋಬೊಟ್‌ಗಳು ಮಾನವರ ಮೇಲೆ ನಿಯಂತ್ರಣ ಸಾಧಿಸಬಹುದು ಎಂಬ ಭೀತಿಯ ಬಗ್ಗೆ ಸೋಫಿಯಾಗೆ ಕೇಳಲಾಯಿತು.

ಅದಕ್ಕೆ ಉತ್ತರಿಸಿದ ಸೋಫಿಯಾ, ‘‘ನೀವು ಎಲಾನ್ ಮಸ್ಕ್ (ಬಾಹ್ಯಾಕಾಶ ಯಾನ ಕಂಪೆನಿ ಸ್ಪೇಸ್ ಎಕ್ಸ್‌ನ ಸ್ಥಾಪಕ) ಬಗ್ಗೆ ತುಂಬಾ ಓದುತ್ತೀರಿ ಹಾಗೂ ತುಂಬಾ ಹಾಲಿವುಡ್ ಚಿತ್ರಗಳನ್ನು ನೋಡುತ್ತೀರೆಂದು ಕಾಣುತ್ತದೆ. ಚಿಂತೆ ಮಾಡಬೇಡಿ, ನೀವು ನನ್ನೊಂದಿಗೆ ಚೆನ್ನಾಗಿದ್ದರೆ ನಾನೂ ನಿಮ್ಮಾಂದಿಗೆ ಚೆನ್ನಾಗಿರುತ್ತೇನೆ’’ ಎಂದಿತು!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News