ಪೆಹ್ಲು ಖಾನ್ ಹತ್ಯೆ ಪ್ರಕರಣವನ್ನು ದುರ್ಬಲಗೊಳಿಸಿದ ಪೊಲೀಸರು

Update: 2017-10-26 18:43 GMT

ಹೊಸದಿಲ್ಲಿ,ಅ.26: ಕಳೆದ ಎಪ್ರಿಲ್‌ನಲ್ಲಿ ರಾಜಸ್ಥಾನದ ಆಲ್ವಾರ್ ಜಿಲ್ಲೆಯ ಬೆಹರೂರ್ ಎಂಬಲ್ಲಿ ಗೋರಕ್ಷಕರಿಂದ ಹರ್ಯಾಣದ ಹೈನುಗಾರ ಪೆಹ್ಲು ಖಾನ್ ಹತ್ಯೆ ಪ್ರಕರಣದ ಕುರಿತು ನಡೆಸಲಾದ ಸ್ವತಂತ್ರ ಸತ್ಯಶೋಧನಾ ತನಿಖೆಯು ಪೊಲೀಸರು ವಿಳಂಬವಾಗಿ ಆರೋಪ ಪಟ್ಟಿಯನ್ನು ಸಲ್ಲಿಸುವ ಮತ್ತು ಕಡಿಮೆ ಶಿಕ್ಷೆ ವಿಧಿಸಬಹುದಾದ ಐಪಿಸಿ ಕಲಮ್‌ಗಳನ್ನು ಹೇರುವ ಮೂಲಕ ಪ್ರಕರಣವನ್ನು ಹೇಗೆ ದುರ್ಬಲಗೊಳಿಸಿದ್ದಾರೆ ಎನ್ನುವುದರ ಮೇಲೆ ಬೆಳಕು ಚೆಲ್ಲಿದೆ.

ಪೊಲೀಸರ ಕ್ರಮವನ್ನು ‘ಅತ್ಯಂತ ಅದಕ್ಷತೆ’ ಅಥವಾ ‘ಆರೊಪಿ ಗೋರಕ್ಷಕರ ವಿರುದ್ಧದ ಪ್ರಕರಣವನ್ನು ದುರ್ಬಲಗೊಳಿಸುವ ಉದ್ದೇಶಪೂರ್ವಕ ಯತ್ನ’ ಎಂದು ತನಿಖೆಯು ಬಣ್ಣಿಸಿದೆ.

ಹರ್ಯಾಣದ ಜೈಸಿಂಗಪುರ ಗ್ರಾಮದ ನಿವಾಸಿ ಪೆಹ್ಲು ಖಾನ್ ಜೈಪುರದ ಜಾನುವಾರು ಜಾತ್ರೆಯಿಂದ ಎರಡು ಆಕಳುಗಳು ಮತ್ತು ಎರಡು ಕರುಗಳನ್ನು ಖರೀದಿಸಿ ತನ್ನೂರಿಗೆ ಸಾಗಿಸುತ್ತಿದ್ದಾಗ ಬೆಹರೂರ್‌ನಲ್ಲಿ ಗೋರಕ್ಷಕರ ಗುಂಪು ಅವರನ್ನು ಥಳಿಸಿ ಹತ್ಯೆ ಮಾಡಿತ್ತು. ಈ ಘಟನೆ ರಾಷ್ಟ್ರವ್ಯಾಪಿ ಗಮನವನ್ನು ಸೆಳೆದಿದ್ದು, ಪೆಹ್ಲು ಖಾನ್ ಗೋರಕ್ಷಣೆಯ ಹೆಸರಿನಲ್ಲಿ ದೇಶಾದ್ಯಂತ ಸರಣಿ ಹತ್ಯೆಗಳ ವಿರುದ್ಧ ಪ್ರತಿಭಟನೆಯ ಮುಖವಾಗಿದ್ದರು.

ಪೆಹ್ಲು ಖಾನ್ ತನ್ನ ಮರಣ ಹೇಳಿಕೆಯಲ್ಲಿ ಹೆಸರಿಸಿದ್ದ ಆರೋಪಿಗಳನ್ನು ಬಂಧಿಸಲಾಗಿಲ್ಲ ಮತ್ತು ತಾವು ಮಾಡಿದ್ದ ಬಂಧನಗಳನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳಲು ಪೊಲೀಸರಿಗೆ ಸಾಧ್ಯವಾಗಿಲ್ಲ ಎನ್ನುವುದನ್ನೂ ಸ್ವತಂತ್ರ ತನಿಖೆಯು ಬಹಿರಂಗಗೊಳಿಸಿದೆ. ಬಂಧಿತ ಏಳು ಆರೋಪಿಗಳ ಪೈಕಿ ಐವರು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ.

ಹಿಂಸೆಯಲ್ಲಿ ತೊಡಗುವ ಗೋರಕ್ಷಕರ ವಿರುದ್ಧ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರು ಜುಲೈನಲ್ಲಿ ರಾಜ್ಯ ಸರಕಾರಗಳಿಗೆ ಸೂಚಿಸಿದ್ದರೂ, ವಿಶೇಷವಾಗಿ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಪೊಲೀಸರು ಪ್ರಧಾನಿಯವರ ಸೂಚನೆಯನ್ನು ಬಹಿರಂಗವಾಗಿಯೇ ಉಲ್ಲಂಘಿಸುತ್ತಿದ್ದಾರೆ ಎಂದು ತನಿಖಾ ವರದಿಯು ಬೆಟ್ಟು ಮಾಡಿದೆ.

ಪೆಹ್ಲು ಖಾನ್ ಹತ್ಯೆ ನಡೆದ ಸ್ಥಳ ಪೊಲೀಸ್ ಠಾಣೆಯಿಂದ ಕೇವಲ ಎರಡು ಕಿ.ಮೀ.ದೂರವಿದ್ದರೂ ಘಟನೆ ನಡೆದ ಒಂಭತ್ತೂವರೆ ಗಂಟೆಗಳ ಬಳಿಕ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು ಎಂದು ಅದು ಹೇಳಿದೆ.

ಪ್ರಕರಣದಲ್ಲಿ ಆರೋಪಿಗೆ ಕಡಿಮೆ ಶಿಕ್ಷೆ ವಿಧಿಸಬಹುದಾದ ದುರ್ಬಲ ಐಪಿಸಿ ಕಲಂಗಳನ್ನು ಉಲ್ಲೇಖಿಸಲಾಗಿದೆ. ಕೊಲೆಯತ್ನಕ್ಕಾಗಿ 10 ವರ್ಷಗಳ ಶಿಕ್ಷೆ ವಿಧಿಸಬಹುದಾದ ಐಪಿಸಿ 307ರ ಬದಲು ಕೇವಲ 3ರಿಂದ 7ವರ್ಷ ಜೈಲುಶಿಕ್ಷೆಯಾಗಬಹುದಾದ ಕಲಂ 308ನ್ನು ಹೇರಲಾಗಿದೆ ಎಂದೂ ವರದಿಯು ತಿಳಿಸಿದೆ. ಕ್ರಿಮಿನಲ್ ಒಳಸಂಚು,ಧಾರ್ಮಿಕ ದ್ವೇಷಕ್ಕೆ ಪ್ರಚೋದನೆ ಇತ್ಯಾದಿಗಳಿಗೆ ಸಂಬಂಧಿಸಿದ ಇತರ ಹಲವಾರು ಐಪಿಸಿ ಕಲಂಗಳನ್ನೂ ಕಡೆಗಣಿಸಲಾಗಿದೆ ಎಂದು ಅದು ಬೆಟ್ಟು ಮಾಡಿದೆ.

ಪೆಹ್ಲು ಖಾನ್ ತನ್ನ ಮರಣ ಹೇಳಿಕೆಯಲ್ಲಿ ಹೆಸರಿಸಿದ್ದ ಆರು ಆರೋಪಿಗಳನ್ನು ಪತ್ತೆ ಹಚ್ಚಲು ಘಟನೆ ನಡೆದು ಐದು ವರ್ಷಗಳಾದರೂ ಪೊಲೀಸರಿಗೆ ಸಾಧ್ಯವಾಗಿಲ್ಲ ಎನ್ನುವುದನ್ನು ನಂಬುವುದು ಕಷ್ಟ ಎಂದು ವರದಿಯು ತಿಳಿಸಿದೆ.

ಇತರ ಕ್ರಮಗಳ ಜೊತೆಗೆ ಪೆಹ್ಲು ಖಾನ್ ಹೆಸರಿಸಿದ್ದ ಆರು ಆರೋಪಿಗಳನ್ನು ಬಂಧಿಸಬೇಕು ಮತ್ತು ಹೊಸ ಎಫ್‌ಐಆರ್ ದಾಖಲಾಗಬೇಕು. ಜೊತೆಗೆ ಹತ್ಯೆಯಲ್ಲಿ ಬಜರಂಗ ದಳ ಮತ್ತು ವಿಹಿಂಪ ಪಾತ್ರಗಳ ಕುರಿತು ತನಿಖೆ ನಡೆಯಬೇಕು ಎಂದು ವರದಿಯು ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News