ಈ ಟೀಕೆಗೆ ಅರ್ಥವಿದೆಯೇ?

Update: 2017-10-27 18:40 GMT

ಮಾನ್ಯರೆ,

ಮೊನ್ನೆ ವಿಧಾನ ಸೌಧದ ವಜ್ರ ಮಹೋತ್ಸವದ ಅಂಗವಾಗಿ ರಾಜ್ಯಕ್ಕೆ ಆಗಮಿಸಿದ ರಾಷ್ಟ್ರಪತಿಯವರು, ಜಂಟಿ ಅಧಿವೇಶನವನ್ನುದ್ದೇಶಿಸಿ ಮಾಡಿದ ತಮ್ಮ ಭಾಷಣದಲ್ಲಿ ಟಿಪ್ಪುಸುಲ್ತಾನರ ಸೇವೆಯನ್ನು ಸ್ಮರಿಸುತ್ತಾ ಅವರನ್ನು ಕೊಂಡಾಡಿದರು. ಆದರೆ ಬಿಜೆಪಿಯ ಜನಪ್ರತಿನಿಧಿಗಳು ಈ ಭಾಷಣವು ರಾಜ್ಯ ಸರಕಾರವು ಬರೆದುಕೊಟ್ಟ ಭಾಷಣವಾಗಿದೆ ಎಂದೆಲ್ಲ ಟೀಕಿಸುತ್ತಿದ್ದಾರೆ.
ರಾಷ್ಟ್ರಪತಿಯವರು ಈ ದೇಶದ ಪ್ರಥಮ ಪ್ರಜೆ. ಅವರು ಯಾರೋ ಬರೆದುಕೊಟ್ಟ ಭಾಷಣಗಳನ್ನು ಓದುವ ಆವಶ್ಯಕತೆಯಾದರೂ ಏನಿದೆ? ಯಾವುದೇ ಒಂದು ಸರಕಾರದ ಆಸೆಯಂತೆ ಅವರು ನಿರ್ದಿಷ್ಟವಾದಂತಹ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕು ಎಂದು ಆಲೋಚಿಸುವುದೇ ಒಂದು ಬಗೆಯ ಅಪರಾಧವಾಗಿದೆ. ಇವರ ಅಭಿಪ್ರಾಯದ ಪ್ರಕಾರ ಅವರು ರಾಷ್ಟ್ರಪತಿಯಾಗದೆ ಬದಲಾಗಿ ಸರಕಾರದ ಏಜೆಂಟರಾಗಿದ್ದಾರೆ ಎನ್ನುವ ಕಲ್ಪನೆ ಇದ್ದಂತಿದೆ.
ಟಿಪ್ಪುಜಯಂತಿ ವಾದವನ್ನು ಬಳಸಿಕೊಳ್ಳಲು ಶತಪ್ರಯತ್ನ ಮಾಡುತ್ತಿದೆೆ. ಹಾಗಾಗಿ ಇಂತಹ ವಿರೋಧಾಭಾಸದ ಹೇಳಿಕೆಗಳು ಅವರ ಜನಪ್ರತಿನಿಧಿಗಳ ಬಾಯಿಂದ ಹೊರಬರುತ್ತಿದೆ. ವಿರೋಧಪಕ್ಷದಲ್ಲಿರುವ ಬಿಜೆಪಿಗೆ ರಾಜ್ಯದ ಜನ ಸಾಮಾನ್ಯರು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಧ್ವನಿಯಾಗಲು ಸಾಕಷ್ಟು ಅವಕಾಶಗಳಿವೆ. ಈ ನಿಟ್ಟಿನಲ್ಲಿ ಇನ್ನಾದರೂ ಅನಗತ್ಯ ವಾದಗಳಿಂದ ದೂರವಿದ್ದು ಜನರ ನಿರೀಕ್ಷೆಯಂತೆ ನಡೆದುಕೊಳ್ಳಲಿ.

Writer - -ರಿಯಾಝ್ ಅಹ್ಮದ್, ರೋಣ

contributor

Editor - -ರಿಯಾಝ್ ಅಹ್ಮದ್, ರೋಣ

contributor

Similar News