ಫ್ರೆಂಚ್ ಓಪನ್: ಸೆಮಿಫೈನಲ್‌ಗೆ ಸಿಂಧು, ಶ್ರೀಕಾಂತ್, ಪ್ರಣಯ್

Update: 2017-10-28 03:59 GMT

ಪ್ಯಾರೀಸ್, ಅ.28: ಫ್ರೆಂಚ್ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಸಿಂಗಲ್ಸ್ ಸೆಣೆಸಾಟದಲ್ಲಿ ಪ್ರಾಬಲ್ಯ ಮೆರೆದ ಭಾರತದ ಪಿ.ವಿ.ಸಿಂಧು, ಕಿಡಂಬಿ ಶ್ರೀಕಾಂತ್ ಹಾಗೂ ಎಚ್.ಎಸ್.ಪ್ರಣಯ್ 3.25 ಲಕ್ಷ ಡಾಲರ್ ಬಹುಮಾನ ಮೊತ್ತದ ಪ್ರತಿಷ್ಠಿತ ಟೂರ್ನಿಯಲ್ಲಿ ಸೆಮಿಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದ್ದಾರೆ.

ರಿಯೊ ಒಲಿಂಪಿಕ್ಸ್ ಬೆಳ್ಳಿಪದಕ ವಿಜೇತೆ ಸಿಂಧು ಮಹಿಳಾ ಸಿಂಗಲ್ಸ್‌ನಲ್ಲಿ ಚೀನಾದ ಚೆನ್ ಯುಫಿ ವಿರುದ್ಧ ಕೇವಲ 40 ನಿಮಿಷ ಹೋರಾಟದಲ್ಲಿ 21-14, 21-14 ನೇರ ಗೇಮ್‌ಗಳ ಜಯ ಸಾಧಿಸಿದರು. ನಾಲ್ಕರ ಘಟ್ಟದಲ್ಲಿ ಸಿಂಧು, ಕೊರಿಯಾದ ಸಂಗ್ ಜೂ ಹ್ಯುಯಾನ್ ಅಥವಾ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ಸೆಣೆಸುವರು.

ಪುರುಷರ ಸಿಂಗಲ್ಸ್‌ನಲ್ಲಿ ಕಳೆದ ವಾರ ಡೆನ್ಮಾರ್ಕ್ ಓಪನ್ ಚಾಂಪಿಯನ್ ಪ್ರಶಸ್ತಿ ಗೆದ್ದ ಕಿಡಂಬಿ ಶ್ರೀಕಾಂತ್ ಪ್ರಸಕ್ತ ವರ್ಷದಲ್ಲಿ ನಾಲ್ಕನೇ ಸೂಪರ್ ಸೀರಿಸ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಶ್ರೀಕಾಂತ್, ಚೀನಾದ ಶಿ ಯೂಕಿ ವಿರುದ್ಧ ಮೊದಲ ಸೆಟ್ ಸೋತರೂ ಬಳಿಕ 8-21, 21-19, 21-19ರಲ್ಲಿ ಪಂದ್ಯ ಗೆದ್ದರು.

ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎಚ್.ಎಸ್.ಪ್ರಣಯ್, ದಕ್ಷಿಣ ಕೊರಿಯಾದ ಜಿಯಾನ್ ಹಯಾಕ್ ಜಿನ್ ವಿರುದ್ಧ 21-16, 21-16 ನೇರ ಸೆಟ್‌ಗಳ ಜಯ ದಾಖಲಿಸಿದರು.ಇಂದು ಸಂಜೆ ನಡೆಯುವ ಸೆಮಿಫೈನಲ್‌ನಲ್ಲಿ ಇಬ್ಬರು ಭಾರತೀಯ ಆಟಗಾರರು ಪರಸ್ಪರ ಎದುರಾಗುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News