×
Ad

ಜಾರ್ಜ್ ರಾಜೀನಾಮೆ ಕೇಳಲು ಬಿಜೆಪಿಗೆ ನೈತಿಕತೆ ಇದೆಯೇ: ಡಾ.ಜಿ.ಪರಮೇಶ್ವರ್

Update: 2017-10-28 19:37 IST

ಬೆಂಗಳೂರು, ಅ.28: ಕೇಂದ್ರ ಹಾಗೂ ರಾಜ್ಯ ಬಿಜೆಪಿಯ ಬಹುತೇಕ ನಾಯಕರ ಮೇಲೆ ಕ್ರಿಮಿನಲ್, ಮಾರಣಾಂತಿಕ ಹಲ್ಲೆ ಸೇರಿದಂತೆ ಹಲವು ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಇಂತಹ ಹಿನ್ನೆಲೆ ಹೊಂದಿರುವ ಬಿಜೆಪಿ ನಾಯಕರಿಗೆ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ಒತ್ತಾಯಿಸಲು ನೈತಿಕತೆಯಿದೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.

ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಸಂಸತ್ ಸದಸ್ಯರ ಮೇಲೆ 111 ಕ್ರಿಮಿನಲ್ ಪ್ರಕರಣಗಳಿವೆ. 1,113 ಆರೋಪ ಪ್ರಕರಣಗಳಲ್ಲಿ ಭಾಗಿಗಳಾಗಿದ್ದಾರೆ. 11ಸಂಸತ್ ಸದಸ್ಯರ ಮೇಲೆ ಮರಣಾಂತಿಕ ಹಲ್ಲೆ ಪ್ರಕರಣ ಹಾಗೂ ಕೇಂದ್ರ ಸರಕಾರದ ನಾಲ್ಕು ಮಂದಿ ಸಚಿವ ಸಂಪುಟ ಸದಸ್ಯರ ಮೇಲೆ ಕ್ರಿಮಿನಲ್ ಕೇಸುಗಳಿರುವಾಗ ಯಾವ ಮುಖವಿಟ್ಟು ಕೆ.ಜೆ.ಜಾರ್ಜ್ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಸಿ.ಟಿ.ರವಿ, ಅರವಿಂದ ಲಿಂಬಾವಳಿ, ಸುರೇಶ್‌ ಕುಮಾರ್, ಶ್ರೀರಾಮುಲು ಸೇರಿದಂತೆ ಬಿಜೆಪಿಯ ಹಲವು ನಾಯಕರ ಮೇಲೆ ಕ್ರಿಮಿನಲ್ ಒಳಗೊಂಡಂತೆ ಹಲವು ಪ್ರಕರಣಗಳಿವೆ. ಮತ್ತೊಬ್ಬರ ಮೇಲೆ ಆರೋಪ ಮಾಡುವುದಕ್ಕೂ ಮೊದಲು ತಮ್ಮ ಹಿನ್ನೆಲೆಗಳನ್ನು ನೋಡಿಕೊಂಡರೆ ಒಳಿತೆಂದು ಪರಮೇಶ್ವರ್ ಸಲಹೆ ನೀಡಿದರು.

ಸಿಬಿಐ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಮರು ನೋಂದಣಿ ಮಾಡಿಕೊಂಡು ತನಿಖೆ ನಡೆಸುತ್ತಿದೆ. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಕೆ.ಜೆ.ಜಾರ್ಜ್ ಹೆಸರನ್ನು ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ಹೀಗಾಗಿ ಕೆ.ಜೆ.ಜಾರ್ಜ್ ರಾಜೀನಾಮೆ ನೀಡುವ ಅಗತ್ಯವೇ ಬರುವುದಿಲ್ಲ. ಬಿಜೆಪಿ ನಾಯಕರು ತಮ್ಮ ರಾಜಕೀಯ ದುರುದ್ದೇಶದಿಂದ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಬಿಜೆಪಿ ನಾಯಕರ ಮಾತುಗಳಿಗೆ ಹೆಚ್ಚಿ ನಮಾನ್ಯತೆ ಕೊಡುವ ಅಗತ್ಯವಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News