×
Ad

ಸಿಐಡಿ ಕಾರ್ಯವೈಖರಿಯ ಪುನರ್ ಅವಲೋಕನಕ್ಕೆ ಸಕಾಲ: ರವಿಕೃಷ್ಣಾರೆಡ್ಡಿ

Update: 2017-10-28 19:40 IST

ಬೆಂಗಳೂರು, ಅ.28: ಸಿಐಡಿ ತನಿಖೆ ಮಾಡಿದ ಎಷ್ಟು ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ ಎಂಬುದರ ಕುರಿತು ಶ್ವೇತಪತ್ರ ಹೊರಡಿಸಿದರೆ ನಿಜಕ್ಕೂ ಅಚ್ಚರಿಯ ಸಂಗತಿ ಒದಗಲಿದೆ. ಬಹುತೇಕ ಪ್ರಕರಣಗಳು ಅಂತಿಮ ಹಂತಕ್ಕೆ ತಲುಪುವುದರಲ್ಲಿ ಸಾಕಷ್ಟು ಕಾಲಾವಕಾಶ ತೆಗೆದುಕೊಳ್ಳುತ್ತವೆ. ಅಷ್ಟರಲ್ಲಿ ಆ ಪ್ರಕರಣ ಗಂಭೀರತೆಯನ್ನು ಕಳೆದು ಕೊಂಡಿರುತ್ತದೆ. ಹೀಗಾಗಿ ಸಿಐಡಿ ತನ್ನ ಕಾರ್ಯವೈಖರಿಯನ್ನು ಪುನರ್ ಅವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಲಂಚಮುಕ್ತ ಕರ್ನಾಟಕ ಮುಕ್ತ ವೇದಿಕೆಯ ಅಧ್ಯಕ್ಷ ರವಿಕೃಷ್ಣಾರೆಡ್ಡಿ ತಿಳಿಸಿದ್ದಾರೆ.

ವಿಶೇಷ ಪ್ರಕರಣಗಳನ್ನು ತನಿಖೆ ಮಾಡಲು ಸಿಐಡಿಯನ್ನು ರಚಿಸಲಾಗಿದೆ. ಇದರಲ್ಲಿ ನೂರಾರು ಕಾನ್‌ ಸ್ಟೇಬಲ್‌ಗಳು, ಸಬ್ ಇನ್‌ ಸ್ಪೆಕ್ಟರ್, ಇನ್‌ ಸ್ಪೆಕ್ಟರ್ ಹಾಗೂ 60-70 ಡಿವೈಎಸ್ಪಿಗಳು, 10ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸುತ್ತಿದೆ. ಆದರೆ, ಈ ಸಂಸ್ಥೆಯ ಫಲಿತಾಂಶ ಮಾತ್ರ ಕಳಪೆಯಿಂದ ಕೂಡಿದೆ ಎಂದು ವಿಷಾದಿಸಿದ್ದಾರೆ.

ಸಿಐಡಿ ಇಲಾಖೆಯ ಅಗತ್ಯ, ಅದರ ಪರಿಣಾಮಕಾರಿ ಕಾರ್ಯನಿರ್ವಹಣೆಯ ಕುರಿತು ಆಗಬೇಕಾದ ಮೌಲ್ಯಮಾಪನ ಹಾಗೂ ಸುಧಾರಣಾ ಕ್ರಮಗಳ ಕುರಿತು ರಾಜ್ಯಪಾಲರಿಗೆ, ಮುಖ್ಯಮಂತ್ರಿಗೆ ಹಾಗೂ ಗೃಹಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಜನತೆಗೆ ಸಿಐಡಿ ಸಂಸ್ಥೆಯ ಕುರಿತು ನಂಬಿಕೆ-ವಿಶ್ವಾಸ ಕಡಿಮೆಯಾಗುತ್ತಿರುವುದರ ಕುರಿತು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಸಂಬಂಧ ಸಿಐಡಿ ನಡೆಸಿದ ತನಿಖೆ ಕುರಿತು ಸುಪ್ರೀಂ ಕೋರ್ಟ್ ಅತೃಪ್ತಿಗೊಂಡು ಸಿಬಿಐಗೆ ವಹಿಸಿದೆ. ಹಾಗೆಯೇ ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅವ್ಯವಹಾರದ ಬಗೆಗಿನ ಪ್ರಕರಣದಲ್ಲಿ ಅಧ್ಯಕ್ಷ ಮಂಜುನಾಥ ಗೌಡ ಮತ್ತಿರರನ್ನು ಬಂಧಿಸಿ ತನಿಖೆ ಮಾಡಲಾಗಿತ್ತು. ಸುಮಾರು 3ವರ್ಷ ತನಿಖೆ ನಡೆಸಿ ಬಿಡುಗಡೆಗೊಳಿಸಿದ ಸಿಐಡಿ ವರದಿಯ ಬಗ್ಗೆ ನಬಾರ್ಡ್ ಸಂಸ್ಥೆ ಅಸಮಾಧಾನಗೊಂಡು ಸಿಬಿಐಗೆ ವಹಿಸಿದೆ. ಇಂತಹ ಹತ್ತಾರು ಉದಾಹರಣೆಗಳನ್ನು ಸಿಐಡಿಯ ಕಳಪೆ ತನಿಖಾ ವರದಿಯ ಕುರಿತು ನೀಡಬಹುದಾಗಿದೆ ಎಂದು ವಿವರಿಸಿದ್ದಾರೆ.

ಸಿಐಡಿಯ ದೋಷಗಳು:

-ಐಪಿಎಸ್ ಶ್ರೇಣಿಯ ಬಹುತೇಕ ಅಧಿಕಾರಿಗಳು ನ್ಯಾಯಾಲಯದಲ್ಲಿ ನಡೆಯುವ ಮೊಕದ್ದಮೆಗಳ ವಿಚಾರಣೆಯ ಸಂದರ್ಭದಲ್ಲಿ ಹಾಜರಿರುವುದಿಲ್ಲ.

-ಐಪಿಎಸ್ ಅಧಿಕಾರಿಗಳನ್ನು ಆಗಿಂದಾಗೆ ವರ್ಗಾವಣೆ ಮಾಡುವುದು.

-ಅಧಿಕಾರಿಗಳ ನಡುವೆ ಸಮನ್ವಯತೆಯ ಕೊರತೆ.

-ಸಿಬಿಐಯಲ್ಲಿ ದಾಖಲಾಗುವ ವಿಶೇಷ ಪ್ರಕರಣಗಳಿಗೆ ವಿಶೇಷ ನ್ಯಾಯಾಲಯಗಳಿವೆ ಮತ್ತು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಿರುತ್ತಾರೆ. ಆದರೆ, ಸಿಐಡಿಗೆ ಆ ಸೌಲಭ್ಯಗಳಿರುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News