ಇಂದಿರಾಗಾಂಧಿ ಸಂಗೀತ ಕಾರಂಜಿಯ ಪುನಶ್ಚೇತನಕ್ಕೆ ರಾಜ್ಯ ಸರಕಾರದಿಂದ 2 ಕೋಟಿ ಬಿಡುಗಡೆ
ಬೆಂಗಳೂರು, ಅ.28: ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ನಗರದ ಇಂದಿರಾಗಾಂಧಿ ಸಂಗೀತ ಕಾರಂಜಿಯ ಪುನಶ್ಚೇತನಕ್ಕೆ 2 ಕೋಟಿ ರೂ.ಬಿಡುಗಡೆ ಮಾಡಲು ರಾಜ್ಯ ಸರಕಾರ ಆದೇಶಿಸಿದೆ.
1994ರಲ್ಲಿ ಆರಂಭವಾದ 60 ಅಡಿ ಉದ್ದ, 15 ಅಡಿ ಅಗಲವಿರುವ ಇಂದಿರಾಗಾಂಧಿ ಸಂಗೀತ ಕಾರಂಜಿಯು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅದರ ನೀರಿನ ಚಿಲುಮೆಗಳು ಶಿಥಿಲಗೊಂಡಿವೆ. ಹೀಗಾಗಿ, ಕಾರಂಜಿಯ ಪುನಶ್ಚೇತನಕ್ಕೆ ತೋಟಗಾರಿಕೆ ಇಲಾಖೆ ಪ್ರಸ್ತಾವ ಸಲ್ಲಿಸಿತ್ತು. ರಾಜ್ಯ ಸರಕಾರ ಅನುದಾನ ನೀಡುವುದಾಗಿ 2015ನೆ ಸಾಲಿನ ಬಜೆಟ್‌ನಲ್ಲಿ ಘೋಷಿಸಿತ್ತು. ಹಣ ಬಿಡುಗಡೆ ಮಾಡುವಂತೆ ಕೋರಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಣಕಾಸು ಇಲಾಖೆಗೆ ಸಾಕಷ್ಟು ಬಾರಿ ಪತ್ರ ಬರೆದಿದ್ದರು. ಆದರೆ, ಹಣಕಾಸು ಇಲಾಖೆ ಹಣ ಬಿಡುಗಡೆ ಮಾಡಿರಲಿಲ್ಲ.
ಕಾರಂಜಿಯಲ್ಲಿ 3 ಕಿ.ಮೀ ಪಾದಚಾರಿ ಮಾರ್ಗ, ಎಲ್‌ಇಡಿ ಬಲ್ಬ್‌ಗಳು, ಹುಲ್ಲುಹಾಸು, ನೀರಿನ ಚಿಲುಮೆಗಳ ಬದಲಾವಣೆ ಹಾಗೂ ನೀರು ಸಂಗ್ರಹಕ್ಕಾಗಿ ತೊಟ್ಟಿ ನಿರ್ಮಾಣ ಮಾಡುವ ಉದ್ದೇಶವಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
14 ಕೋಟಿ ರೂ.ಕಾಮಗಾರಿ ಪ್ರಸ್ತಾವ ತಿರಸ್ಕಾರ: ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕಾರಂಜಿಗೆ ಹೊಸ ಸ್ವರೂಪ ನೀಡುವ ಸಲುವಾಗಿ ಸಿಂಗಪುರದ ಜೆಡ್‌ಟಿಸಿ ಕಂಪೆನಿಯ ಪ್ರತಿನಿಧಿಗಳು ಹಾಗೂ ತೋಟಗಾರಿಕಾ ಇಲಾಖೆಯ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಿ 16 ಕೋಟಿಯ ಅಂದಾಜು ವೆಚ್ಚದ ಸಮಗ್ರ ವರದಿ ನೀಡಿದ್ದರು.
ಲೇಸರ್ ದೀಪಗಳ ಮೂಲಕ ಗಣ್ಯರ ಭಾವಚಿತ್ರಗಳ ಪ್ರದರ್ಶನದ ಯೋಜನೆಯನ್ನೂ ರೂಪಿಸಲಾಗಿತ್ತು. ಈ ಸಂಬಂಧ ತೋಟಗಾರಿಕೆ ಇಲಾಖೆಯು ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು.
ಅಷ್ಟೊಂದು ದೊಡ್ಡ ಮೊತ್ತ ನೀಡಲು ಸಾಧ್ಯವಿಲ್ಲ. 2 ಕೋಟಿ ನೀಡಬಹುದು ಎಂದು ಹಣಕಾಸು ಇಲಾಖೆ ತಿಳಿಸಿತ್ತು. ಬಳಿಕ 2 ಕೋಟಿಯ ಪರಿಷ್ಕೃತ ಪ್ರಸ್ತಾವ ಸಲ್ಲಿಸಿದ್ದೆವು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪ್ರತಿನಿತ್ಯ ಸಂಗೀತ ಕಾರಂಜಿ ಪ್ರದರ್ಶನ: ಸೋಮವಾರ ಹೊರತುಪಡಿಸಿ ವಾರದ 6 ದಿನಗಳಲ್ಲಿ ಸಂಜೆ 7ರಿಂದ 7.30 ಹಾಗೂ 8 ರಿಂದ 8.30ರ ವರೆಗೆ ಸಂಗೀತ ಕಾರಂಜಿಯ ಪ್ರದರ್ಶನ ನಡೆಯುತ್ತದೆ. ದೇಶಭಕ್ತಿಗೀತೆಗಳು ಹಾಗೂ ನಾಡ ಗೀತೆಗೆ ಕಾರಂಜಿಯ ಸ್ಪರ್ಶ ನೀಡಲಾಗುತ್ತದೆ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಇಲ್ಲಿಗೆ ನೂರಾರು ಜನ ಬರುತ್ತಾರೆ. ಸರಕಾರಿ ರಜಾದಿನ ಹಾಗೂ ಪ್ರತಿ ರವಿವಾರದಂದು ಸಾವಿರಕ್ಕೂ ಅಧಿಕ ಮಂದಿ ಬರುತ್ತಾರೆ. ಮೂಲಸೌಕರ್ಯ ಕಲ್ಪಿಸಿದರೆ ಹೆಚ್ಚಿನ ಜನರು ಬರುವ ಸಾಧ್ಯತೆಯಿದೆ ಎಂದು ಕಾರಂಜಿ ನಿರ್ವಹಣಾ ಅಧಿಕಾರಿಗಳು ತಿಳಿಸಿದರು.
ಅನುದಾನ ಬಿಡುಗಡೆಯ ಆದೇಶವನ್ನಷ್ಟೇ ಹೊರಡಿಸಲಾಗಿದೆ. ಅಧಿವೇಶನ ಮುಗಿದ ಬಳಿಕ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ. ಆ ನಂತರವಷ್ಟೇ ಕಾರಂಜಿಯ ಪುನಶ್ಚೇತನಕ್ಕೆ ಮುಂದಾಗಲಾಗುವುದು.
-ಮಹಾಂತೇಶ್ ಮುರುಗೋ