ಹಜ್‌ಯಾತ್ರಿಗಳನ್ನು ವಂಚಿಸದಿರಿ: ಖಾಸಗಿ ಟೂರ್ ಆಪರೇಟರ್‌ಗಳಿಗೆ ಝಮೀರ್ ಅಹ್ಮದ್ ಮನವಿ
ಬೆಂಗಳೂರು, ಅ.28: ಬಡವರು, ಮಧ್ಯಮ ವರ್ಗದವರು ಶ್ರಮಪಟ್ಟು ತಮ್ಮ ಆದಾಯದಲ್ಲಿ ಉಳಿಸಿದ ಹಣದಲ್ಲಿ ಪವಿತ್ರ ಹಜ್ ಹಾಗೂ ಉಮ್ರಾ ಯಾತ್ರೆಗಳನ್ನು ಕೈಗೊಳ್ಳುತ್ತಾರೆ. ಅಂತಹವರನ್ನು ಯಾವುದೇ ಕಾರಣಕ್ಕೂ ವಂಚನೆ ಮಾಡಬೇಡಿ ಎಂದು ಮಾಜಿ ಸಚಿವ ಝಮೀರ್ ಅಹ್ಮದ್‌ಖಾನ್ ಮನವಿ ಮಾಡಿದ್ದಾರೆ.
ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ದೇಶದ ವಿವಿಧ ರಾಜ್ಯಗಳ ಖಾಸಗಿ ಟೂರ್ ಆಪರೇಟರ್‌ಗಳಿಗಾಗಿ ಆಯೋಜಿಸಲಾಗಿದ್ದ ‘ಮನಾಝಿಲ್ ಅಲ್ ಮುಖ್ತರಾ ಹೊಟೇಲ್ ಎಕ್ಸ್‌ಪೋ’ ಸಮಾಲೋಚನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಹಜ್, ಉಮ್ರಾ ಯಾತ್ರೆ ಕೈಗೊಳ್ಳಲು ಬಯಸುವವರು ಟೂರ್ ಆಪರೇಟರ್‌ಗಳ ಕಚೇರಿಗೆ ಬಂದಾಗ ಅವರಿಗೆ ಇಲ್ಲಸಲ್ಲದ ಆಸೆಗಳನ್ನು ತೋರಿಸಿ, ಅವರ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಳ ಮಾಡಲಾಗುತ್ತದೆ. ಆದರೆ, ಯಾತ್ರೆಗೆ ಹೋದಾಗ ವಾಸ್ತವಿಕ ಪರಿಸ್ಥಿತಿ ತಿಳಿದು ಅವರು ಸಮಸ್ಯೆಗಳನ್ನು ಎದುರಿಸುವ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ ಎಂದು ಹೇಳಿದರು.
ಲಾಭದ ಆಸೆಗಾಗಿ ಕೆಲವರು ಮಾಡುವ ವಂಚನೆಯಿಂದಾಗಿ, ಎಲ್ಲ ಟೂರ್ ಆಪರೇಟರ್‌ಗಳು ನಿಂದನೆಗೊಳಗಾಗುತ್ತಾರೆ. ಅಲ್ಲಾಹ್‌ನ ಪವಿತ್ರ ಮನೆಯ ದರ್ಶನವನ್ನು ಮಾಡಿಸುವ ಕಾರ್ಯ ನೀವುಗಳು ಮಾಡುತ್ತಿದ್ದೀರಾ, ಇದರಲ್ಲಿ, ಲಾಭದ ಜೊತೆಗೆ ಸೇವಾ ಮನೋಭಾವನೆಯು ಬೆಳೆಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.
ಯಾತ್ರಿಗಳಿಗೆ ಯಾತ್ರೆಯ ಸಂದರ್ಭದಲ್ಲಿ ಒದಗಿಸಲಾಗುವ ಸೌಲಭ್ಯಗಳ ಬಗ್ಗೆ ಮೊದಲೆ ಖಚಿತ ಮಾಹಿತಿಯನ್ನು ನೀಡಿ, ಸೇವೆಗೆ ತಕ್ಕಂತೆ ಶುಲ್ಕವನ್ನು ಪಡೆಯಿರಿ. ಆದರೆ, ಹೇಳುವುದು ಒಂದು, ಮಾಡುವುದು ಮತ್ತೊಂದು ಅನ್ನುವ ರೀತಿಯಲ್ಲಿ ಯಾವುದೇ ಕಾರಣಕ್ಕೂ ವರ್ತಿಸಬೇಡಿ ಎಂದು ಕಿವಿಮಾತು ಹೇಳಿದರು.
ಮನಾಝಿಲ್ ಅಲ್ ಮುಖ್ತರಾ ಸಂಸ್ಥೆಯ ವಝೀರ್ ಪಾಷ ಬೆಂಗಳೂರಿನವರಾಗಿದ್ದು. ಮದೀನಾದಲ್ಲಿ 11 ಹೊಟೇಲ್‌ಗಳನ್ನು ಹೊಂದಿದ್ದಾರೆ. ರಾಜ್ಯ ಹಜ್ ಸಮಿತಿ ಹಾಗೂ ಖಾಸಗಿಯಾಗಿ ಹಜ್, ಉಮ್ರಾ ಯಾತ್ರೆಗೆ ತೆರಳುವ ಬಹುತೇಕ ಯಾತ್ರಿಗಳು ಇವರ ಹೊಟೇಲ್‌ನಲ್ಲೇ ವಾಸ್ತವ್ಯ ಹೂಡುತ್ತಾರೆ. ನಮ್ಮ ರಾಜ್ಯದ ಯಾತ್ರಿಗಳು ಅಲ್ಲಿ ಯಾವುದಾದರೂ ಸಮಸ್ಯೆಗಳಿಗೆ ಸಿಕ್ಕಿಹಾಕಿಕೊಂಡರೆ, ಇವರು ನೆರವು ನೀಡಲು ಸದಾ ಮುಂದಿರುತ್ತಾರೆ ಎಂದು ಹೇಳಿದರು.
ಮನಾಝಿಲ್ ಅಲ್ ಮುಖ್ತರಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಝೀರ್ ಪಾಷ ಮಾತನಾಡಿ, ಹಜ್ ಹಾಗೂ ಉಮ್ರಾ ಯಾತ್ರೆಗೆ ಯಾತ್ರಿಗಳನ್ನು ಕರೆದೊಯ್ಯುವ ವಿಚಾರದಲ್ಲಿ ಇಂದು ಖಾಸಗಿ ಟೂರ್ ಆಪರೇಟರ್‌ಗಳ ನಡುವೆ ಸ್ಪರ್ಧೆಯನ್ನು ನಾವು ಕಾಣುತ್ತಿದ್ದೇವೆ. ಆದರೆ, ಈ ಸ್ಪರ್ಧೆ ಆರೋಗ್ಯಕರವಾಗಿರಬೇಕು ಎಂದರು.
ಕೆಲವರು 30, 40 ಸಾವಿರ ರೂ.ಗಳಿಗೆ ಯಾತ್ರೆಗೆ ಕರೆದೊಯ್ಯುವುದಾಗಿ ಜಾಹೀರಾತುಗಳನ್ನು ನೀಡುತ್ತಾರೆ. ನಮ್ಮ ಸ್ಪರ್ಧೆಯ ನಡುವೆ ಯಾತ್ರಿಗಳು ಸಮಸ್ಯೆ ಎದುರಿಸಬಾರದು. ಆದುದರಿಂದ, ಎಲ್ಲ ಖಾಸಗಿ ಟೂರ್ ಆಪರೇಟರ್‌ಗಳು ಪರಸ್ಪರ ಚರ್ಚೆ ನಡೆಸಿ ಕನಿಷ್ಠ ಹಾಗೂ ಗರಿಷ್ಠ ಶುಲ್ಕವನ್ನು ನಿಗದಿ ಮಾಡುವ ಒಂದು ನಿರ್ಣಯಕ್ಕೆ ಬರುವುದು ಉತ್ತಮ ಎಂದರು.
ಮದೀನಾದಲ್ಲಿ ನಮ್ಮ ಸಂಸ್ಥೆ 11 ಹೊಟೇಲ್‌ಗಳನ್ನು ಹೊಂದಿದೆ. ಎರಡು ವೀಸಾ ಸಂಸ್ಥೆಗಳು ನಮ್ಮೆಂದಿಗೆ ಒಪ್ಪಂದ ಮಾಡಿಕೊಂಡಿವೆ. ಹೊಟೇಲ್‌ನಲ್ಲಿ ವಾಸ್ತವ್ಯ ಹೂಡುವುದು, ವಿಸಾ ಕೊಡಿಸುವುದು, ಊಟದ ವ್ಯವಸ್ಥೆ ಎಲ್ಲ ನಮ್ಮ ಮೂಲಕ ಆಗುತ್ತದೆ. ಕೇವಲ ಟಿಕೆಟ್ ಖರೀದಿ ಮಾತ್ರ ನೀವುಗಳು ಮಾಡಬೇಕು ಎಂದು ವಝೀರ್‌ಪಾಷ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಮೀರೆ ಶರಿಅತ್ ಮೌಲಾನ ಸಗೀರ್ ಅಹ್ಮದ್‌ಖಾನ್ ರಶಾದಿ, ಮೌಲಾನ ಮಖ್ಸೂದ್ ಇಮ್ರಾನ್ ರಶಾದಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಉಬೇದುಲ್ಲಾ ಶರೀಫ್, ವಿಧಾನಪರಿಷತ್ ಸದಸ್ಯ ರಿಝ್ವಾನ್ ಅರ್ಶದ್, ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಬಿಬಿಎಂಪಿ ಸದಸ್ಯ ಸೈಯ್ಯದ್ ಮುಜಾಹಿದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.