ಉನ್ನತ ಶಿಕ್ಷಣ ಇಲಾಖೆಗೆ ಪ್ರಧಾನ ಕಾರ್ಯದರ್ಶಿ ನೇಮಕಕ್ಕೆ ಮನವಿ: ರಮೇಶ್ ಬಾಬು
ಬೆಂಗಳೂರು, ಅ.28: ರಾಜ್ಯ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯು ಕಳೆದ 8 ತಿಂಗಳಿನಿಂದ ಪೂರ್ಣಾವಧಿ ನೇಮಕಾತಿ ಇಲ್ಲದೆ ಖಾಲಿ ಇದೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಪ್ರಭಾರ ಕಾರ್ಯದರ್ಶಿ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ರಮೇಶ್‌ಬಾಬು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಅವರು, ಈಗಿರುವ ಪ್ರಭಾರ ಕಾರ್ಯದರ್ಶಿಗಳು, ರಾಜ್ಯ ವಿದ್ಯುತ್ ಪ್ರಸರಣ ನಿಗಮದ ಪೂರ್ಣಾವಧಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದು ಅವರಿಗೆ ಶಿಕ್ಷಣ ಇಲಾಖೆಯ ಪ್ರಭಾರ ಹುದ್ದೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕೆಪಿಟಿಸಿಎಲ್‌ನಲ್ಲಿ ಸುಮಾರು 70 ಸಾವಿರಕ್ಕೂ ಹೆಚ್ಚು ನೌಕರರು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳು ಇದರ ಅಡಿಯಲ್ಲಿ ಕೆಲಸ ಮಾಡಬೇಕಿದೆ. ಕೆಪಿಟಿಸಿಎಲ್‌ನಲ್ಲಿ ಕಾರ್ಯಭಾರದ ಒತ್ತಡ ಹೆಚ್ಚು ಇರುವುದರಿಂದ ಇಲ್ಲಿನ ಪೂರ್ಣಾವಧಿಯ ಕಾರ್ಯಭಾರದ ಒತ್ತಡದ ಜೊತೆಗೆ ಉನ್ನತ ಶಿಕ್ಷಣ ಇಲಾಖೆಯ ಕಾರ್ಯವನ್ನು ನಿರ್ವಹಿಸಬೇಕಾಗಿದೆ. ಇದರಿಂದ ಉನ್ನತ ಶಿಕ್ಷಣ ಇಲಾಖೆಯ ಬಹುತೇಕ ಕಡತಗಳು ಬಾಕಿ ಇರುತ್ತವೆ ಮತ್ತು ಸಮರ್ಪಕವಾದ ಟಿಪ್ಪಣಿಗಳಿಗೆ ಒಳಪಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯದ ಆಯವ್ಯಯದಲ್ಲಿ ಸುಮಾರು ಐದು ಸಾವಿರ ಕೋಟಿ ರೂ.ಗೂ ಹೆಚ್ಚು ಹಣವನ್ನು ಉನ್ನತ ಶಿಕ್ಷಣ ಇಲಾಖೆಗೆ ನೀಡಲಾಗಿದೆ. ಇದರ ಜೊತೆಗೆ ರಾಜ್ಯದ ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ. ಇಲಾಖೆಗೆ ಪೂರ್ಣಾವಧಿ ಮತ್ತು ದಕ್ಷ ಪ್ರಧಾನ ಕಾರ್ಯದರ್ಶಿ ನೇಮಕವಾದರೆ ಇಲಾಖೆಯ ಕಾರ್ಯಚಟುವಟಿಕೆಗಳು ಸುಲಲಿತವಾಗಿ ಮತ್ತು ಶೀಘ್ರವಾಗಿ ನಡೆಯುತ್ತವೆ ಎಂದು ರಮೇಶ್‌ಬಾಬು ಅಭಿಪ್ರಾಯಪಟ್ಟಿದ್ದಾರೆ.
ಇಲಾಖೆಯ ಆರ್ಥಿಕ ವಿಚಾರಗಳಿಗೆ ಸಂಬಂಧಪಟ್ಟಂತೆ ಬಹುತೇಕ ನಿರ್ಧಾರಗಳು ಟೀಕೆಗೆ ಒಳಗಾಗುತ್ತಿವೆ. ಅಲ್ಲದೇ ಪ್ರಭಾರ ಕಾರ್ಯದರ್ಶಿಗಳ ಮೂಲಕ ಆರ್ಥಿಕ ವಿಷಯಗಳ ನಿರ್ಣಯಗಳು ಅಂಗೀಕಾರವಾದರೆ ಇದರಿಂದ ರಾಜ್ಯ ಸರಕಾರದ ಹಣಕಾಸಿನ ನಷ್ಟಗಳಿಗೆ ಯಾರನ್ನೂ ಜವಾಬ್ದಾರಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಉನ್ನತ ಶಿಕ್ಷಣ ಇಲಾಖೆಯಲ್ಲಿ ರಾಜ್ಯ ಸರಕಾರದ ಅನುದಾನಗಳು ಮತ್ತು ಕೇಂದ್ರ ಸರಕಾರದ ಅನುದಾನಗಳು ಸೇರಿದಂತೆ ಕೋಟ್ಯಂತರ ರೂ.ಗಳು ಸಮರ್ಪಕವಾಗಿ ಬಳಕೆಯಾಗಬೇಕಾಗಿದೆ. ಆದ ಕಾರಣ, ರಾಜ್ಯ ಸರಕಾರವು ಕೂಡಲೆ ರಾಜ್ಯ ಉನ್ನತ ಶಿಕ್ಷಣ ಇಲಾಖೆಗೆ ಪೂರ್ಣಾವಧಿಯ ಪ್ರಧಾನ ಕಾರ್ಯದರ್ಶಿಯನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರಮೇಶ್‌ಬಾಬು ಕೋರಿದ್ದಾರೆ.