‘ವಿವೇಕಿ’ಗಳ ವಿರೋಧ ಮತ್ತು ವಿಜಯ್

Update: 2017-10-28 18:57 GMT

 ‘ಇರಲಾರದೆ ಇರುವೆ ಬಿಟ್ಕೊಂಡ್ರು...’ ಅಂತಾರಲ್ಲ, ಹಂಗಾಗಿದೆ ಈ ಸಂಘ ಪರಿವಾರ ಮತ್ತು ಭಾರತೀಯ ಜನತಾ ಪಾರ್ಟಿ ಜನಗಳ ಕತೆ.
ವಿಜಯ್ ನಾಯಕನಟನಾಗಿ ನಟಿಸಿರುವ ‘ಮೆರ್ಸಲ್’ ಎಂಬ ತಮಿಳು ಚಿತ್ರದಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಕುರಿತ ಒಂದೇ ಒಂದು ಡೈಲಾಗ್ ಇದೆ. ಅದು ಎರಡೂವರೆ ಗಂಟೆಯ ಚಿತ್ರದಲ್ಲಿ ಎರಡೂವರೆ ನಿಮಿಷದ್ದು. ಅದನ್ನು ಅದರ ಪಾಡಿಗೆ ಬಿಟ್ಟಿದ್ದರೆ, ಜನ ನೋಡುತ್ತಿದ್ದರು, ನೋಡಿ ಮರೆತುಬಿಡುತ್ತಿದ್ದರು. ಸುಮ್ಮನಿರದ ಸಂಘಪರಿವಾರ ಮತ್ತು ಬಿಜೆಪಿಯವರು, ‘‘ಜಿಎಸ್‌ಟಿಯನ್ನು ಲೇವಡಿ ಮಾಡಲಾಗಿದೆ, ಮೋದಿಯನ್ನು ಅವಮಾನಿಸಲಾಗಿದೆ, ಚಿತ್ರದಿಂದ ಆ ಭಾಗವನ್ನು ಕತ್ತರಿಸಬೇಕು, ಚಿತ್ರ ನಿಷೇಧಿಸಬೇಕು’’ ಎಂದು ಬೊಬ್ಬೆ ಹಾಕಿದರು.
ಅಲ್ಲಿಯವರೆಗೆ ಅದೇನೆಂದು ತಲೆಕೆಡಿಸಿಕೊಳ್ಳದ ತಮಿಳುನಾಡಿನ ಜನ, ಯಾವಾಗ ಬಿಜೆಪಿ ವಿರೋಧಿಸಿತೋ, ಅದುಮಿಟ್ಟಿದ್ದ ಅನುಮಾನ ಅತಿಯಾಯಿತು. ಕೆಟ್ಟ ಕುತೂಹಲ ಕೆರಳಿತು. ‘ಇದರಲ್ಲೇನೋ ಇದೆ’ ಎನ್ನುವುದು ಎಲ್ಲರ ಬಾಯಿಯ ಎಲೆಯಡಿಕೆಯಾಯಿತು. ಸುಮ್ಮನಿದ್ದ ಜನ ಜಿಎಸ್‌ಟಿ ಬಗ್ಗೆ, ಜಿಎಸ್‌ಟಿ ಜಾರಿ ಮಾಡುವಾಗ ಮೋದಿಯ ಮೊಂಡುತನದ ಬಗ್ಗೆ, ನೋಟು ಅಮಾನ್ಯೀಕರಣ ತಂದಿಟ್ಟ ತೊಂದರೆಯ ಬಗ್ಗೆ, ಡಿಜಿಟಲ್ ಮನಿ ಮಾಡಿದ ಅನಾಹುತಗಳ ಬಗ್ಗೆ, ಮಾಡಿದ್ದೆಲ್ಲ ಸರಿ ಎಂದು ಸಮರ್ಥಿಸಿ ಕೊಳ್ಳುವ ಸಂಘಪರಿವಾರದ ವಿತಂಡವಾದಿಗಳ ವಕ್ರಬುದ್ಧಿಯ ಬಗ್ಗೆ ಮಾತನಾಡತೊಡಗಿದರು.
‘ಮೆರ್ಸಲ್’ ಚಿತ್ರ ಅನಗತ್ಯ ವಿವಾದಕ್ಕೊಳಗಾಗುತ್ತಿದ್ದಂತೆ ಆತಂಕಗೊಂಡ ತಮಿಳಿನ ಮತ್ತೊಬ್ಬ ನಾಯಕನಟ ವಿಶಾಲ್, ಗೆಳೆಯ ವಿಜಯ್ ಚಿತ್ರದ ಪರ ನಿಂತು, ಬೆಂಬಲಿಸಿದರು. ಆ ಸುದ್ದಿ ಹೊರಬೀಳುವುದಕ್ಕೂ ಮುಂಚೆಯೇ, ನಟ ವಿಶಾಲ್ ಮನೆ ಮತ್ತು ಕಚೇರಿ ಮೇಲೆ ಕೇಂದ್ರ ತೆರಿಗೆ ಅಧಿಕಾರಿಗಳ ತಂಡ ದಾಳಿ ಮಾಡಿ, ಲೆಕ್ಕಪತ್ರಗಳನ್ನು ಕೆದಕಿ ಕೋಲಾಹಲವೆಬ್ಬಿಸಿತು. ನಟ ವಿಶಾಲ್ ಮಾಡಿದ ಮಹಾಪರಾಧವಾದರೂ ಏನು? ಒಬ್ಬ ನಟನಿಗೆ ಮತ್ತೊಬ್ಬ ನಟ ಬೆಂಬಲ ಸೂಚಿಸುವುದು ತಪ್ಪೇ? ಬೆಂಬಲಿಸಿದವರ ಮನೆ ಮೇಲೆ ತೆರಿಗೆ ಅಧಿಕಾರಿಗಳ ದಾಳಿ ಮಾಡಿದ್ದು ಸರಿಯಾದ ಕ್ರಮವೇ? ಆ ಮೂಲಕ ವಿರೋಧಿಸಿದವರನ್ನು ಅಧಿಕಾರದ ಬಲದಿಂದ ಬಗ್ಗುಬಡಿಯುವ, ದನಿ ಎತ್ತದಂತೆ ದಮನಿಸುವ ಕ್ರಮ ಪ್ರಜಾಸತ್ತಾತ್ಮಕವೇ?
ಏನತ್ಮಧ್ಯೆ, ಎಚ್.ರಾಜ ಎಂಬ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ, ‘‘ನಟ ವಿಜಯ್ ಕ್ರಿಶ್ಚಿಯನ್, ಆದಕಾರಣ ಆತ ದೇವಸ್ಥಾನಗಳನ್ನು ಕಟ್ಟುವ ಬದಲಿಗೆ ಆಸ್ಪತ್ರೆ ಕಟ್ಟಿಸಿ ಎಂದಿದ್ದಾನೆ. ಚರ್ಚ್ ಕಟ್ಟಿಸುವ ಬದಲು ಆಸ್ಪತ್ರೆ ಕಟ್ಟಿಸಲಿ. ಇದು ಹಿಂದೂಗಳನ್ನು ಪ್ರಚೋದಿಸುವ ಕೆಲಸ’’ ಎಂದು ಉರಿಯುವ ತು್ಪಕ್ಕೆ ಧರ್ಮದ ಬೆಂಕಿ ಬೆರೆಸಿದರು.
ಒಂದು ತಮಿಳು ಚಿತ್ರದ ಒಂದೇ ಒಂದು ಸಂಭಾಷಣೆಯನ್ನು ಸಹಿಸದ ಮೋದಿ ಮತ್ತವರ ಪಠಾಲಂನ ರಂಪ ರಾದ್ಧಾಂತ ಕಂಡ ಕಮಲ್ ಹಾಸನ್, ಅಖಾಡಕ್ಕಿಳಿದರು. ಬಹಿರಂಗವಾಗಿಯೇ ವಿಜಯ್ ಬೆಂಬಲಕ್ಕೆ ನಿಂತರು. ಮೊದಲೇ ಮೋದಿಯ ಸರ್ವಾಧಿಕಾರಿ ಧೋರಣೆ ಕುರಿತು ಟೀಕೆ ಮಾಡಿದ್ದ, ರಾಜಕೀಯಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದ ಕಮಲ್, ಈಗ ವಿಜಯ್ ಪರವಾಗಿ ನಿಂತದ್ದು ಮೋದಿಗೆ ತಲೆಬಿಸಿ ತಂದಿದೆ. ಅಷ್ಟೇ ಅಲ್ಲದೆ, ಮದ್ರಾಸ್ ಹೈಕೋರ್ಟ್ ಕೂಡ, ಚಿತ್ರವನ್ನು ನಿಷೇಧಿಸಬೇಕೆಂದು ಸಲ್ಲಿಸಿದ್ದ ಅಶ್ವಥಾಮನ್ ಎಂಬ ವಕೀಲರ ಅರ್ಜಿಯನ್ನು ತಳ್ಳಿಹಾಕಿ, ಹೈಕೋರ್ಟ್ ಈ ವಿಷಯದಲ್ಲಿ ಹಸ್ತಕ್ಷೇಪ ಾಡಲಾಗದು ಎಂದು ಸ್ಪಷ್ಟಪಡಿಸಿದೆ.

ಇಷ್ಟಕ್ಕೇ ತತ್ತರಿಸಿಹೋಗಿದ್ದ ಬಿಜೆಪಿಗಳು ಬೆಚ್ಚಿಬೀಳುವಂತೆ, ತಮಿಳರ ಆರಾದ್ಯದೈವ ರಜನಿಕಾಂತ್ ಕೂಡ, ‘ಮೆರ್ಸಲ್’ ಚಿತ್ರದ ಪರ ವಕಾಲತ್ತು ವಹಿಸಿದರು. ಈ ಬೆಳವಣಿಗೆಯನ್ನು ಬಿಜೆಪಿಯಲ್ಲ, ಯಾರೂ ನಿರೀಕ್ಷಿಸಿರಲಿಲ್ಲ. ಏಕೆಂದರೆ, ತಮಿಳುನಾಡು ದ್ರಾವಿಡರ ನಾಡು, ಪೆರಿಯಾರ್ ಬೀಡು. ತಮಿಳುನಾಡಿನ ರಾಜಕಾರಣದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ನೆಲೆ-ಬೆಲೆ ಎರಡೂ ಇಲ್ಲ. ಇಲ್ಲಿ ಏನಿದ್ದರೂ ಪ್ರಾದೇಶಿಕ ಪಕ್ಷಗಳದ್ದೆ ಪ್ರಾಬಲ್ಯ. ಶೂದ್ರ ಸಮುದಾಯದ್ದೇ ಸರಕಾರ. ಇಂತಹ ತಮಿಳುನಾಡಿನಲ್ಲಿ, ಜಯಲಲಿತಾರ ನಿರ್ಗಮನವನ್ನು ಮತ್ತು ಅದರಿಂದ ತಮಿಳುನಾಡಿನಲ್ಲಾದ ರಾಜಕೀಯ ಅಸ್ಥಿರತೆಯನ್ನು ಮೋದಿ ಮಹಾನುಭಾವರು ಸಂದರ್ಭದ ಲಾಭ ಪಡೆಯಲು ಹವಣಿಸಿದ್ದರು. ಕೇಂದ್ರದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಕ್ಕಮಟ್ಟಿಗೆ ಯಶಸ್ವಿಯೂ ಆಗಿದ್ದರು. ಹಾಗೆಯೇ ಅಗಣಿತ ಅಭಿಮಾನಿಗಳನ್ನು ಹೊಂದಿರುವ ಸೂಪರ್ ಸ್ಟಾರ್ ರಜನಿಕಾಂತ್‌ರನ್ನು ತಮ್ಮತ್ತ ಸೆಳೆದುಕೊಂಡು, ಆತನ ಜನಪ್ರಿಯತೆಯನ್ನೇ ಸಂಪರ್ಕ ಸೇತುವೆಯನ್ನಾಗಿಸಿಕೊಂಡು ತಮಿಳುನಾಡಿನಲ್ಲಿ ಬಿಜೆಪಿ ಬೇರುಬಿಡಲು ಯೋಜನೆ ತಯಾರಿಸಿದ್ದರು. ಅವರನ್ನು ಒಲಿಸಿಕೊಳ್ಳಲು ಭೇಟಿ ಮಾಡಿ, ಕೈ ಕುಲುಕಿ, ಬಿಗಿದಪ್ಪಿಕೊಂಡಿದ್ದರು. ಮೋದಿಯ ಮೋಡಿಗೊಳಗಾದ ರಜನಿಕಾಂತ್, ‘‘ಈ ದೇಶಕ್ಕೆ ಮೋದಿಯೇ ಭವಿಷ್ಯ’’ ಎಂದು ಭಾರೀ ಭರವಸೆ ಇಟ್ಟಿದ್ದರು. ಭವಿಷ್ಯದಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿ, ರಾಜಕೀಯಕ್ಕಿಳಿಯುವ ಸುಳಿವು ನೀಡಿದ್ದರು. ಈಗ ಎಲ್ಲವೂ ತಲೆಕೆಳಗು. ಮುಂದೇನಾಗಲಿದೆ ಎಂಬುದು ಯಾರ ಊಹೆಗೂ ನಿಲುಕದು.
ತಮಿಳುನಾಡಿನಲ್ಲಿ ಸಿನೆಮಾ ಎನ್ನುವುದು ಜನರ ನರನಾಡಿಗಳಲ್ಲಿ ಇಳಿದುಹೋಗಿದೆ. ಅವರ ಬದುಕು ಕೂಡ ಸಿನೆಮಾದೊಂದಿಗೆ ಬೆರೆತುಹೋಗಿದೆ. ಸಿನೆಮಾವನ್ನೇ ಉಂಡುಟ್ಟು ಉಸಿರಾಡುವ ಜನ ಅವರು. ನಟರ ನಡೆ-ನುಡಿಯನ್ನು ತಮ್ಮ ಬೆವರಿನೊಂದಿಗೆ ಬೆರೆಸಿ ಭಾವನಾತ್ಮಕ ನೆಲೆಗೆ ಕೊಂಡೊಯ್ಯುವ ಭಾವಜೀವಿಗಳು. ತಮಿಳುನಾಡಿನ ರಾಜಕೀಯ ನಾಯಕರಾದ ಕಾಮರಾಜ್, ಅಣ್ಣಾ ದೊರೈ, ಕರುಣಾನಿಧಿ, ಎಂಜಿಆರ್, ಜಯಲಲಿತಾರನ್ನು ಮತ್ತು ರಾಜಕಾರಣದೊಂದಿಗೆ ಸಿನೆಮಾ- ಹಾಲಿನೊಂದಿಗೆ ನೀರಿನಂತೆ ಬೆರೆತಿರುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ತಮಿಳುನಾಡು ಏನು ಎನ್ನುವುದು ಅರ್ಥವಾಗುತ್ತದೆ. ಹಾಗೆಯೇ ಇತ್ತೀಚಿನ ವರ್ಷಗಳಲ್ಲಿ ವಿಜಯಕಾಂತ್, ರಜನಿಕಾಂತ್, ಕಮಲ್ ಹಾಸನ್, ವಿಜಯ್‌ವರೆಗಿನ ನಟರು ರಾಜಕಾರಣದತ್ತ ಒಲವು ತೋರುತ್ತಿರುವುದನ್ನು ಗಮನಿಸಿದರೂ ಸಾಕಿತ್ತು. ಗಮನಿಸದ ಬಿಜೆಪಿ ವಿಜಯ್ ವಿರೋಧಿಸುವ ಭರಾಟೆಯಲ್ಲಿ ವಿವೇಚನಾರಹಿತವಾಗಿ ವರ್ತಿಸಿತು.

43ರ ಹರೆಯದ ನಟ ವಿಜಯ್ ಕೂಡ ಸಾಮಾನ್ಯನೇನಲ್ಲ. ಅಪ್ಪಚಿತ್ರನಿರ್ದೇಶಕ, ಅಮ್ಮ ಸಂಗೀತಗಾರ್ತಿ. ಚೆನ್ನೈನಲ್ಲಿ ಹುಟ್ಟಿ ಬೆಳೆದ ವಿಜಯ್, ಬಾಲಕನಾಗಿದ್ದಾಗಲೇ ನಟನೆಯನ್ನು ಕರಗತ ಮಾಡಿಕೊಂಡವರು. ನಾಯಕನಟನಾಗಿ ಭಡ್ತಿ ಪಡೆದ ನಂತರ, ಚಿತ್ರದಿಂದ ಚಿತ್ರಕ್ಕೆ ಬೆಳೆದು ಬೆಟ್ಟವಾದವರು. ರಜನಿ ಮತ್ತು ಕಮಲ್‌ಗೆ ಸರಿಸಮನಾಗಿ ನಿಲ್ಲಬಲ್ಲ ನಾಯಕನಾದವರು. ಅಭಿಮಾನಿ ಸಂಘಗಳನ್ನು ಹೊಂದುವ ಮೂಲಕ ಜನಪ್ರಿಯ ನಟನಾದವರು. ಈತನ ಪ್ರತಿಯೊಂದು ಚಿತ್ರವೂ ಒಂದಿಲ್ಲೊಂದು ವಿವಾದ ಹುಟ್ಟುಹಾಕುವ, ಆ ಮೂಲಕ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಚಿತ್ರವೇ. ಇತ್ತೀಚಿನ ‘ಮೆರ್ಸಲ್’ ಕೂಡ ಅದೇ ಧಾಟಿಯ ಚಿತ್ರ. 120 ಕೋಟಿ ಬಜೆಟ್‌ನ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಚಿತ್ರ. ಇನ್ನೂ ಮೀಸೆ ಕೂಡ ಮೂಡದ, ಅಟ್ಲಿಕುಮಾರ್ ಎಂಬ ಯುವಕ ನಿರ್ದೇಶಿಸಿದ ಚಿತ್ರ. ಬಿಸಿರಕ್ತದ ಯುವಕ, ತನ್ನ ವಯಸ್ಸಿಗೆ ಸಹಜವಾಗಿಯೇ ತನ್ನ ಸಿನೆಮಾದಲ್ಲಿ ಸಮಕಾಲೀನ ಸಮಸ್ಯೆಯನ್ನು ನಾಯಕನಟ ವಿಜಯ್ ಮೂಲಕ ಪ್ರೇಕ್ಷಕರ ಎದೆಗೆ ದಾಟಿಸಲು, ದಾಖಲಿಸಲು ಪ್ರಯತ್ನಿಸಿದ್ದ. ಸಿನೆಮಾಗಳ ಉದ್ದೇಶವೂ ಅದೇ ತಾನೆ. ಆಯಾಯ ಕಾಲಘಟ್ಟದ ಆಗುಹೋಗುಗಳನ್ನು ಅವಲೋಕಿಸುವುದಲ್ಲವೇ?

‘ಮೆರ್ಸಲ್’ ಚಿತ್ರದಲ್ಲೂ ಸದ್ಯದ ಸಮಸ್ಯೆಯಾದ ಡಿಜಿಟಲ್ ಮನಿ ಕುರಿತ ಪ್ರಸ್ತಾಪವಿದೆ. ಹಾಸ್ಯನಟ ವಡಿವೇಲು ಪಾತ್ರದ ಮೂಲಕ ಡಿಜಿಟಲ್ ಮನಿಯನ್ನು, ಅದು ತಂದೊಡ್ಡಿರುವ ತೊಂದರೆಯನ್ನು ಲಘುವಾಗಿ ಲೇವಡಿ ಮಾಡಲಾಗಿದೆ. ವಡಿವೇಲು ದರೋಡೆಕೋರರ ಕೈಗೆ ಸಿಕ್ಕಿಬೀಳುತ್ತಾರೆ. ಅವರು ಹಣಕ್ಕಾಗಿ ಪೀಡಿಸುತ್ತಾರೆ. ಆಗ ವಡಿವೇಲು, ‘ನನ್ನಲ್ಲಿ ಹಣವಿಲ್ಲ, ಇಂಡಿಯಾ ಈಗ ಡಿಜಿಟಲ್ ಆಗಿದೆ, ಎಲ್ಲಾ ಡಿಜಿಟಲ್ ಮನಿ. ನಿಮಗೆ ಹಣ ಬೇಕೆಂದರೆ ನಾನು ಕ್ಯೂನಲ್ಲಿ ನಿಂತು ತಂದುಕೊಡಬೇಕಾಗುತ್ತದೆ’ ಎನ್ನುತ್ತಾರೆ. ಹಾಗೆಯೇ ಜಿಎಸ್‌ಟಿ ಕುರಿತ ಒಂದು ಡೈಲಾಗಿದೆ. ಜನರನ್ನು ಉದ್ದೇಶಿಸಿ ನಾಯಕನಟ ವಿಜಯ್ ‘‘ಬಡವರಿಗೆ ಉಚಿತ ವೈದ್ಯಕೀಯ ಸೌಲಭ್ಯ ಸಿಗಬೇಕು. ಸಿಂಗಪೂರ್‌ನಲ್ಲಿ ಶೇ.7 ತೆರಿಗೆ ಇದೆ. ನಮ್ಮಲ್ಲೇಕೆ ಶೇ.28 ಜಿಎಸ್‌ಟಿ ಇದೆ. ಬಡವರ ಜೀವ ಉಳಿಸುವ ಔಷಧಗಳ ಮೇಲೇಕೆ ತೆರಿಗೆ. ಮದ್ಯದ ಮೇಲೆ ಯಾಕಿಲ್ಲ. ಸರಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಇಲ್ಲದೆ ಮಕ್ಕಳು ಸಾಯುತ್ತಿವೆ. ಸರಕಾರಿ ಆಸ್ಪತ್ರೆಗಳಲ್ಲಿ ಯಾವ ಸೌಲಭ್ಯವೂ ಇಲ್ಲ ಎಂಬ ಭಯವೇ, ಕಾರ್ಪೊರೇಟ್ ಆಸ್ಪತ್ರೆಗಳಿಗೆ ಅನುಕೂಲವಾಗಿದೆ. ಭಯವೇ ಸುಲಿಗೆಯ ಅಸ್ತ್ರವಾಗಿದೆ. ಎಲ್ಲಾ ಕಡೆ ಸುಸಜ್ಜಿತ ಸರಕಾರಿ ಆಸ್ಪತ್ರೆಗಳಿರಬೇಕು, ಉಚಿತವಾಗಿ ಔಷಧಿ, ಚಿಕಿತ್ಸೆ ದೊರೆಯಬೇಕು’’ ಎನ್ನುತ್ತಾರೆ.
ಸಿನೆಮಾ ನಟನೊಬ್ಬ ಹೀಗೆ ಹೇಳಿದಾಕ್ಷಣ ಸಮಸ್ಯೆ ಪರಿಹಾರವಾಗುವುದಿಲ್ಲ. ಜನರಿಗೂ ಅದು ಗೊತ್ತು. ಗೊತ್ತಿಲ್ಲದ ಬಿಜೆಪಿಯವರು ಮಾತ್ರ ಜಿಎಸ್‌ಟಿ ಎಂದಾಕ್ಷಣ ಬೊಬ್ಬೆ ಹಾಕಿದರು. ಅದರಲ್ಲೇನೋ ರಾಜಕೀಯ ಲಾಭ ಹುಡುಕಿದರು. ಅದಕ್ಕೆ ಧರ್ಮದ ಬಣ್ಣ ಬಳಿದರು. ದೇವಸ್ಥಾನಗಳನ್ನು ಎಳೆದು ತಂದರು. ವಿರೋಧ, ವಿವಾದವಾಗುತ್ತಿದ್ದಂತೆ, ‘ಮೆರ್ಸಲ್’ ಚಿತ್ರದ ಆ ಜಿಎಸ್‌ಟಿ ವೀಡಿಯೊ ತುಣುಕು ಮೊಬೈಲ್‌ಗಳಿಗೆ ಇಳಿಯಿತು. ಕ್ಷಣಮಾತ್ರದಲ್ಲಿ ವೈರಲ್ ಆಯಿತು. ದೇಶದಾದ್ಯಂತ ಸುದ್ದಿಯಾಯಿತು. ಒಂದು ಸಾಧಾರಣ ಹೊಡಿ ಬಡಿ ಚಿತ್ರ, ‘ವಿವೇಕಿ’ಗಳ ವಿರೋಧದಿಂದಾಗಿ ಸೂಪರ್ ಹಿಟ್ ಚಿತ್ರವಾಯಿತು. ಬಿಡುಗಡೆಯಾದ ಒಂದೇ ವಾರಕ್ಕೆ 170 ಕೋಟಿ(ಅಧಿಕೃತವಾಗಿ ವಿಜಯ್ ಹೇಳಿದ್ದು) ಬಾಚಿತು. ಇತ್ತ ಬಿಜೆಪಿಗಳ ಮಾನವೂ ಹೆಯಿತು, ಅತ್ತ ಚಿತ್ರವೂ ಗೆದ್ದಿತು.
ಸಿನೆಮಾ ಎಂಬುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹಿಡಿದ ಕನ್ನಡಿ. ನಿರ್ದೇಶಕನಾದವನು ಸಿನೆಮಾ ಎಂಬ ಪ್ರಭಾವಿ ಮಾಧ್ಯಮದ ಮೂಲಕ ಸದ್ಯದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದು ತಪ್ಪಾ? ಅನಿಸಿಕೆ-ಅಭಿಪ್ರಾಯಗಳನ್ನು ದಾಖಲಿಸುವುದು, ವಿರೋಧಿಸುವುದು, ವಿಮರ್ಶಿಸುವುದು ತಪ್ಪಾ? ಆಳುವ ಸರಕಾರ ಎಂದರೆ ಎಲ್ಲಿಂದಲೋ ಬಂದವರಲ್ಲ, ನಾವೇ ಚುನಾಯಿಸಿ ಕಳುಹಿಸಿದವರು. ಜನತಂತ್ರ ವ್ಯವಸ್ಥೆಯಲ್ಲಿ ಜನರೇ ಸಾರ್ವಭೌಮರು. ಅಂದಮೇಲೆ ಜನರ ಭಾವನೆಗಳಿಗೆ ಬೆಲೆ ಕೊಡುವ, ಅವರ ಟೀಕೆ-ಟಿಪ್ಪಣಿಗಳನ್ನು ಕಿವಿಗೊಟ್ಟು ಆಲಿಸುವ, ವಿರೋಧ-ವಿಮರ್ಶೆಯನ್ನು ಮುಕ್ತವಾಗಿ ಸ್ವೀಕರಿಸುವ ಸಹನೆ ಸರಕಾರಕ್ಕಿರಬೇಕು. ಅದು ಕಾಂಗ್ರೆಸ್ ಆಗಿರಲಿ, ಬಿಜೆಪಿಯಾಗಿರಲಿ ಅದನ್ನು ಪಾಲಿಸಲೇಬೇಕು. ಪಾಲಿಸಿದರೆ ಪ್ರಜಾಪ್ರಭುತ್ವ, ಇಲ್ಲದಿದ್ದರೆ ಸರ್ವಾಧಿಕಾರತ್ವ. ಈಗಿರುವ ಸರಕಾರದ ನಿಲುವು, ಧೋರಣೆಯನ್ನು ನೀವೇ ನಿರ್ಧರಿಸಿ.

Writer - -ಬಸು ಮೇಗಲಕೇರಿ

contributor

Editor - -ಬಸು ಮೇಗಲಕೇರಿ

contributor

Similar News