ಮಸೂದ್‌ನನ್ನು ಉಗ್ರ ಪಟ್ಟಿಗೆ ಸೇರಿಸುವ ನಿರ್ಣಯಕ್ಕೆ ಚೀನಾ ಬ್ರೇಕ್

Update: 2017-10-30 14:35 GMT

ಬೀಜಿಂಗ್, ಅ. 30: ಪಾಕಿಸ್ತಾನದ ಜೈಶೆ ಮುಹಮ್ಮದ್ (ಜೆಇಎಂ) ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‌ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವಂತೆ ಕೋರಿ ವಿಶ್ವಸಂಸ್ಥೆಯಲ್ಲಿ ಅಮೆರಿಕ ಈ ವಾರ ಮಂಡಿಸಲಿರುವ ನಿರ್ಣಯಕ್ಕೆ ಮತ್ತೊಮ್ಮೆ ತಡೆ ಹಾಕಲು ಚೀನಾ ನಿರ್ಧರಿಸಿದೆ.

ಅಝರ್‌ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ವಿಷಯದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267ನೆ ಸಮಿತಿಯು ಇನ್ನೂ ಒಮ್ಮತಕ್ಕೆ ಬಂದಿಲ್ಲ ಎಂದು ಚೀನಾ ವಿದೇಶ ಸಚಿವಾಲಯ ಹೇಳಿದೆ.

ಕಳೆದ ವರ್ಷ ಪಂಜಾಬ್‌ನ ಉರಿ ಸೇನಾ ನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯ ಪ್ರಮುಖ ರೂವಾರಿ ಅಝರ್ ಆಗಿದ್ದಾನೆ.

‘‘ಅಝರ್‌ನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವಂತೆ ಕೋರುವ ನಿರ್ದಿಷ್ಟ ದೇಶದ ಮನವಿಯ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಈ ವಿಷಯದ ಬಗ್ಗೆ ಚರ್ಚೆ ನಡೆಸಲು ಹೆಚ್ಚಿನ ಸಮಯಕ್ಕಾಗಿ ಚೀನಾ ತಾಂತ್ರಿಕ ತಡೆಯನ್ನು ಒಡ್ಡಿದೆ. ಸಮಿತಿಯು ಈ ವಿಷಯದಲ್ಲಿ ಇನ್ನೂ ಒಮ್ಮತಕ್ಕೆ ಬಂದಿಲ್ಲದಿರುವುದು ವಿಷಾದದ ಸಂಗತಿಯಾಗಿದೆ’’ ಎಂದು ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ಹೇಳಿದರು.

ಭಾರತಕ್ಕೆ ಮಗ್ಗುಲ ಮುಳ್ಳಾಗಿ ಕಾಡುತ್ತಿರುವ ಚೀನಾ

ಅಝರ್‌ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಗಳಿಗೆ ಚೀನಾ ಪದೇ ಪದೇ ತಡೆಯೊಡ್ಡುತ್ತಿದೆ.

 ಜೈಶೆ ಮುಹಮ್ಮದ್ ಉಗ್ರನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸಬೇಕೆಂಬ ಭಾರತದ ಮನವಿಗೆ ಚೀನಾ ಕಳೆದ ವರ್ಷವೂ ತಾಂತ್ರಿಕ ತಡೆ ಹೇರಿತ್ತು. ಆ ತಡೆಯ ಅವಧಿ ಕಳೆದ ವರ್ಷದ ಕೊನೆಗೆ ಮುಗಿದಾಗ, ಈ ವರ್ಷದ ಜನವರಿಯಲ್ಲಿ ಅಮೆರಿಕ ಈ ಸಂಬಂಧ ಹೊಸದಾಗಿ ನಿರ್ಣಯವೊಂದನ್ನು ಮಂಡಿಸಿತು. ಈ ನಿರ್ಣಯಕ್ಕೆ ಫ್ರಾನ್ಸ್ ಮತ್ತು ಬ್ರಿಟನ್‌ಗಳು ಬೆಂಬಲ ನೀಡಿದವು.

ಆದರೆ, ಬೀಜಿಂಗ್ ಅದಕ್ಕೂ ತಾಂತ್ರಿಕ ತಡೆ ವಿಧಿಸಿತು. ಅದರ ವಾಯಿದೆ ಆಗಸ್ಟ್‌ನಲ್ಲಿ ಮುಗಿದಾಗ, ತಡೆಯನ್ನು ಮೂರು ತಿಂಗಳ ಕಾಲ ವಿಸ್ತರಿಸಿತು. ಅದರ ಅವಧಿ ಗುರುವಾರ ಮುಕ್ತಾಯಗೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News