'ಬಡವರು, ರೈತರು, ಕಾರ್ಮಿಕರನ್ನು ಬೀದಿಗೆ ತಳ್ಳಿದ ನರೇಂದ್ರ ಮೋದಿ ಢೋಂಗಿ ಪ್ರಧಾನಿ'
ಬೆಂಗಳೂರು, ಅ.31: ದೇಶದಲ್ಲಿ ಬಹುಮುಖ ಬೆಲೆಯ ನೋಟುಗಳ ಅಮಾನ್ಯ ಮಾಡುವ ಮೂಲಕ ಬಡವರು, ರೈತರು, ಕಾರ್ಮಿಕರನ್ನು ಬೀದಿಗೆ ತಳ್ಳಿದ ಪ್ರಧಾನಿ ನರೇಂದ್ರ ಮೋದಿ ಓರ್ವ ಢೋಂಗಿ ಪ್ರಧಾನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ 33ನೆ ಪುಣ್ಯಸ್ಮರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ನೋಟುಗಳ ಅಮಾನ್ಯದಿಂದ ಕಪ್ಪುಹಣ ಹೊಂದಿರುವವರನ್ನು ನಿದ್ದೆಗೆಡಿಸುತ್ತೇನೆ ಎಂದು ನರೇಂದ್ರ ಮೋದಿಯವರು ಹೇಳಿದ್ದರು. ಆದರೆ, ಅವರು ಯಾರೂ ನಿದ್ದೆಗೆಡಲಿಲ್ಲ. ಅವರ ಬದಲು ಬಡವರು, ಕೂಲಿ ಕಾರ್ಮಿಕರು, ರೈತರು ಆರ್ಥಿಕವಾಗಿ ಸಂಕಷ್ಟಗಳಿಗೆ ಸಿಲುಕಿಕೊಂಡರು. ಹಲವಾರು ಮಂದಿ ಅಮಾಯಕರು ತಮ್ಮ ಪ್ರಾಣ ಕಳೆದು ಕೊಂಡರು ಎಂದು ವಾಗ್ದಾಳಿ ನಡೆಸಿದರು.
ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ ಬ್ಯಾಂಕುಗಳ ರಾಷ್ಟ್ರೀಕರಣ ಮಾಡುವ ಮೂಲಕ ಬಡವರು ಬ್ಯಾಂಕ್ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರು. ಆದರೆ, ಯಾವತ್ತೂ ಢೋಂಗಿತನ ಮಾಡಲಿಲ್ಲ. ನರೇಂದ್ರ ಮೋದಿಯವರು ನೋಟುಗಳ ಅಮಾನ್ಯ ಮಾಡುವ ಮೂಲಕ ಬಡವರು ಬ್ಯಾಂಕುಗಳ ಕಡೆಗೆ ಸುಳಿಯದಂತೆ ಮಾಡಿದ್ದಾರೆ ಎಂದು ಟೀಕಿಸಿದರು.
ಇಂದಿರಾಗಾಂಧಿಯವರು ಕೇವಲ ರಾಜಕಾರಣಕ್ಕಾಗಿ ಬಡತನದ ಬಗ್ಗೆ ಮಾತನಾಡುತ್ತಿರಲಿಲ್ಲ. ತಮ್ಮ 20 ಅಂಶಗಳ ಕಾರ್ಯಕ್ರಮಗಳ ಜೊತೆಗೆ ಗರೀಬಿ ಹಠಾವೋ ಅನ್ನೋ ಕ್ರಾಂತಿಕ್ರಾರಿ ಕಾರ್ಯಕ್ರಮವನ್ನು ಜಾರಿ ಮಾಡಿದರು. ಎಲ್ಲ ವರ್ಗದ ಬಡ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದರು ಎಂದು ಹೇಳಿದರು.
ದೇಶದಲ್ಲಿ ಆರ್ಥಿಕ ಭದ್ರತೆ ಮತ್ತು ಸ್ವಾವಲಂಬನೆ ಸಾಧ್ಯವಾಗಿದ್ದರೆ ಅದಕ್ಕೆ ಇಂದಿರಾಗಾಂಧಿಯವರ ಕೊಡುಗೆ ಅಪಾರ. ಗರೀಬಿ ಹಠಾವೋ ಜೊತೆಗೆ ರಾಜಧನವನ್ನು ರದ್ದು ಮಾಡಿದ್ದರು ಎಂದು ಅವರು, ಇಂದಿರಾಗಾಂಧಿ ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಿದ ಉಕ್ಕಿನ ಮಹಿಳೆ. ಬಾಂಗ್ಲಾದೇಶ ಇವತ್ತು ಸ್ವತಂತ್ರ ದೇಶವಾಗಿದ್ದರೆ ಅದಕ್ಕೆ ಇಂದಿರಾಗಾಂಧಿ ಕಾರಣ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದಂತಹ ಅಪ್ರತಿಮ ನಾಯಕಿ. ಇದಕ್ಕಾಗಿಯೇ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಇಂದಿರಾಗಾಂಧಿಯನ್ನು ‘ದುರ್ಗೆ’ ಎಂದು ಕರೆದಿದ್ದರು ಎಂದು ಸ್ಮರಿಸಿದರು.
ಬಡವರ ಕಾರ್ಯಕ್ರಮಕ್ಕೆ ಇಂದಿರಾ ಪ್ರೇರಣೆ: ನಮ್ಮ ಸರಕಾರ ಜಾರಿಗೆ ತಂದಿರುವ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ಇಂದಿರಾಗಾಂಧಿ ಪ್ರೇರಣೆ. ಅದಕ್ಕಾಗಿಯೇ ಅವರ ಹೆಸರಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದೇವೆ. ಜ.1 ರಿಂದ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಗೊಳ್ಳಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ಇಂಧನ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂ.ಗಳ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನ ಸಮಿತಿಯು ವಿಧಾನಸಭೆಯಲ್ಲಿ ತನ್ನ ವರದಿ ಮಂಡಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಟ ಉಪೇಂದ್ರ ಪ್ರತ್ಯೇಕ ಪಕ್ಷ ಸ್ಥಾಪನೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮದೇ ಆದ ರಾಜಕೀಯ ಪಕ್ಷ, ಸಂಘ-ಸಂಸ್ಥೆಗಳನ್ನು ಆರಂಭಿಸುವ ಹಕ್ಕಿದೆ. ಅದರಂತೆ ಉಪೇಂದ್ರ ಪಕ್ಷ ಸ್ಥಾಪನೆ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್, ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಕೆ.ಗೋವಿಂದರಾಜ್, ಕೆಪಿಸಿಸಿ ಉಪಾಧ್ಯಕ್ಷರಾದ ರಾಣಿ ಸತೀಶ್, ಆರ್.ಕೃಷ್ಣಪ್ಪ, ಖಜಾಂಚಿ ಕೃಷ್ಣಂರಾಜು, ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.