ಬುಮ್ರಾಗೆ ಅಗ್ರ ಸ್ಥಾನ, ಕೊಹ್ಲಿ ನಂ.1

Update: 2017-10-31 18:40 GMT

ದುಬೈ, ಅ.31: ಭಾರತದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಮಂಗಳವಾರ ಬಿಡುಗಡೆಯಾದ ಐಸಿಸಿ ಟ್ವೆಂಟಿ-20 ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಬಾಚಿಕೊಂಡಿದ್ದಾರೆ. ಹೊಸದಿಲ್ಲಿಯಲ್ಲಿ ಬುಧವಾರ ಆರಂಭವಾಗಲಿರುವ ನ್ಯೂಝಿಲೆಂಡ್ ವಿರುದ್ಧದ 3 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಜಯ ಸಾಧಿಸಿದರೆ ರ‍್ಯಾಂಕಿಂಗ್‌ನಲ್ಲಿ ಪ್ರಗತಿಯಾಗುವ ಸಾಧ್ಯತೆಯಿದೆ.

ಟ್ವೆಂಟಿ-20 ರ‍್ಯಾಂಕಿಂಗ್‌ನಲ್ಲಿ ಪಾಕ್ ಸ್ಪಿನ್ನರ್ ಇಮಾದ್ ವಾಸಿಂ ಒಂದು ಸ್ಥಾನ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬುಮ್ರಾ ಅಗ್ರ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.

ಬಲಗೈ ಬೌಲರ್ ಬುಮ್ರಾ ಸೋಮವಾರ ಬಿಡುಗಡೆಯಾಗಿದ್ದ ಏಕದಿನ ರ‍್ಯಾಂಕಿಂಗ್‌ನಲ್ಲಿ 3ನೆ ಸ್ಥಾನಕ್ಕೆ ಭಡ್ತಿ ಪಡೆದಿದ್ದರು. ಭಾರತದ ನಾಯಕ ವಿರಾಟ್ ಕೊಹ್ಲಿ ಏಕದಿನ ರ‍್ಯಾಂಕಿಂಗ್‌ನಲ್ಲಿ ದಕ್ಷಿಣ ಆಫ್ರಿಕದ ಎಬಿಡಿ ವಿಲಿಯರ್ಸ್‌ರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ್ದರು. ಇದೀಗ ಚುಟುಕು ಮಾದರಿ ಪಂದ್ಯದಲ್ಲೂ ಪ್ರಾಬಲ್ಯ ಸಾಧಿಸಿರುವ ಕೊಹ್ಲಿ ನಂ.1 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯದ ಆ್ಯರೊನ್ ಫಿಂಚ್ ಎರಡನೆ ಸ್ಥಾನದಲ್ಲಿದ್ದಾರೆ.

ಬುಧವಾರ ಆರಂಭವಾಗಲಿರುವ ಟ್ವೆಂಟಿ-20 ಸರಣಿಯಲ್ಲಿ ಭಾರತ ಜಯ ಸಾಧಿಸಿದರೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೇರಲಿದೆ.

ಪ್ರಸ್ತುತ ನ್ಯೂಝಿಲೆಂಡ್ ಟ್ವೆಂಟಿ-20ಯಲ್ಲಿ 125 ಅಂಕಗಳೊಂದಿಗೆ ನಂ.1 ಸ್ಥಾನದಲ್ಲಿದೆ. ಶ್ರೀಲಂಕಾ ವಿರುದ್ಧ ಸರಣಿಯನ್ನು 3-0 ಅಂತರದಿಂದ ಜಯ ಸಾಧಿಸಿರುವ ಪಾಕಿಸ್ತಾನ ಒಟ್ಟು 124 ಅಂಕ ಗಳಿಸಿದೆ. 116 ಅಂಕ ಗಳಿಸಿರುವ ಭಾರತ ಐದನೆ ಸ್ಥಾನದಲ್ಲಿದೆ. ನ್ಯೂಝಿಲೆಂಡ್ ವಿರುದ್ಧದ ಟ್ವೆಂಟಿ-20 ಸರಣಿಯನ್ನು ಭಾರತ 3-0 ಅಂತರದಿಂದ ಜಯಿಸಿದರೆ 122 ಅಂಕ ಗಳಿಸಲಿದೆ. ಈ ಮೂಲಕ ಎರಡನೆ ಸ್ಥಾನಕ್ಕೆ ಭಡ್ತಿ ಪಡೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News