×
Ad

ಬೆಂಗಳೂರು ರೈಲ್ವೆ ರಕ್ಷಣಾ ಪಡೆಯಿಂದ ರಾಜಸ್ಥಾನದಲ್ಲಿ ಅಪಹರಣಕ್ಕೊಳಗಾಗಿದ್ದವಳ ರಕ್ಷಣೆ

Update: 2017-11-01 20:39 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.1: ರಾಜಸ್ಥಾನದಲ್ಲಿ ಅಪಹರಣ ಆಗಿದ್ದ ಅಪ್ರಾಪ್ತ ಬಾಲಕಿಯನ್ನು ಬೆಂಗಳೂರು ರೈಲ್ವೆ ರಕ್ಷಣಾ ಪಡೆ ಅಧಿಕಾರಿಗಳು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅ.28ರಂದು ರಾಜಸ್ಥಾನದ ನಾಗೋರ್ ಜಿಲ್ಲೆಯ ಶಾದಲ್ ವಾಷ್ ಗ್ರಾಮದ 16 ವರ್ಷದ ಬಾಲಕಿಯನ್ನು ದುಷ್ಕರ್ಮಿಗಳು ಅಪಹರಣ ಮಾಡಿದ್ದರು.

 ಈ ಸಂಬಂಧ ಬಾಲಕಿ ಪೋಷಕರು ಮಗಳು ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ತನಿಖೆ ನಡೆಸಿದಾಗ, ಅಪಹರಣಕಾರರು ಬಾಲಕಿಯನ್ನು ರೈಲಿನಲ್ಲಿ ಬೇರೆ ರಾಜ್ಯಗಳಿಗೆ ಕರೆದುಕೊಂಡು ಬರುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಅಲ್ಲಿನ ರೈಲ್ವೆ ಪೊಲೀಸರು ತಮ್ಮ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಅಪ್‌ಡೇಟ್ ಮಾಡಿ ದೇಶದ ಎಲ್ಲಾ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸೋಮವಾರ ರಾಜಸ್ಥಾನ ರೈಲ್ವೆ ಪೊಲೀಸರಿಗೆ ಅಪಹರಣಕಾರರು ಅಪ್ರಾಪ್ತೆಯನ್ನು ರೈಲಿನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಬೆಂಗಳೂರು ರೈಲ್ವೆ ರಕ್ಷಣಾ ಪಡೆಗೆ ಯುವತಿಯ ಫೋಟೊ ಕಳುಹಿಸಿ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಬೆಂಗಳೂರು ರೈಲ್ವೆ ರಕ್ಷಣಾ ಪಡೆಯ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ರೈಲಿನ ಬೋಗಿಯ ಶೌಚಾಲಯದಲ್ಲಿ ಕೈ ಕಾಲುಗಳನ್ನು ಕಟ್ಟಿ, ಕಿರುಚಾಡದಂತೆ ಬಾಯಿಗೆ ಬಟ್ಟೆ ತುರುಕಿದ ಸ್ಥಿತಿಯಲ್ಲಿ ಅಪ್ರಾಪ್ತ ಬಾಲಕಿ ಪತ್ತೆಯಾಗಿದ್ದಳು ಎಂದು ತಿಳಿದುಬಂದಿದೆ.

ಕೂಡಲೇ ಪೊಲೀಸರು ಬಾಲಕಿಯ ಕೈ ಕಾಲುಗಳಿಗೆ ಕಟ್ಟಿದ ಹಗ್ಗವನ್ನು ಬಿಚ್ಚಿ ವಿಚಾರಿಸಿದಾಗ, ಅಪಹರಣ ಮಾಡಿರುವುದು ಬೆಳಕಿಗೆ ಬಂದಿದೆ. ಅಪಹರಣಕಾರರನ್ನು ಬಂಧಿಸಲು ಪೊಲೀಸರು ಎಲ್ಲೆಡೆ ಶೋಧ ನಡೆಸಿದರಾದರೂ, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಅಪ್ರಾಪ್ತ ಬಾಲಕಿಯ ತಂದೆ ಮತ್ತು ರಾಜಸ್ಥಾನದ ರೈಲ್ವೆ ಪೊಲೀಸರು ಬೆಂಗಳೂರಿಗೆ ಬಂದು ಬಾಲಕಿಯನ್ನು ಕರೆದುಕೊಂಡು ಹಿಂದಿರುಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News