×
Ad

ನಿತ್ಯೋತ್ಸವ ಕವಿ ನಿಸಾರ್ ಅಹಮದ್‌ಗೆ ‘ಪಂಪ ಪ್ರಶಸ್ತಿ’

Update: 2017-11-01 21:11 IST

ಬೆಂಗಳೂರು, ನ.1: 2017 ನೆ ಸಾಲಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡುವ ಪ್ರತಿಷ್ಠಿತ ಪಂಪ ಪ್ರಶಸ್ತಿಯನ್ನು ನಿತ್ಯೋತ್ಸವದ ಕವಿ, ನಾಡೋಜ ಡಾ.ನಿಸಾರ್ ಅಹಮದ್ ಅವರಿಗೆ ನೀಡಲಾಗುತ್ತಿದೆ.

ನಿಸಾರ್ ಅಹಮದ್ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ 1984-87 ರವರೆಗೆ ರಚನಾತ್ಮಕ ಕೆಲಸಗಳನ್ನು ಮಾಡಿದ್ದಾರೆ. ಇವರಿಗೆ ಇದುವರೆಗೂ ನಾಡೋಜ ಪುರಸ್ಕಾರ, ಮಂಜೇಶ್ವರ ಗೋವಿಂದ ಪೈ ಪ್ರಶಸ್ತಿ, ಭಾರತ ಸರಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ, ಕುವೆಂಪು ಹೆಸರಿನ ವಿಶ್ವ ಮಾನವ ಪ್ರಶಸ್ತಿ, ವಿ.ಕೃ.ಗೋಕಾಖ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಶಿವಮೊಗ್ಗದಲ್ಲಿ ನಡೆದ 73ನೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

2017 ರ ವಿಶ್ವ ವಿಖ್ಯಾತ ದಸರಾವನ್ನು ಉದ್ಘಾಟಿಸುವ ಅವಕಾಶವೂ ನಿತ್ಯೋತ್ಸವ ಕವಿಗೆ ದೊರಕಿತ್ತು. ನಾಡೋಜ ನಿಸಾರ್ ಅವರು 14 ಕವನ ಸಂಕಲನ, 10 ಗದ್ಯ ಕೃತಿಗಳು, 5 ಮಕ್ಕಳ ಸಾಹಿತ್ಯ ಗ್ರಂಥ, 5 ಅನುವಾದ ಗ್ರಂಥ ಸೇರಿದಂತೆ ವಿವಿಧ ಪ್ರಕಾರದ 35ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಇದರ ಜೊತೆಗೆ 2017 ನೆ ಸಾಲಿನ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಸಾಹಿತಿ ಶಿವಮೊಗ್ಗದ ಸ.ಉಷಾ, ಪ್ರೊ.ಕೆ.ಜಿ.ಕುಂದಣಗಾರ, ಗಡಿನಾಡ ಸಾಹಿತ್ಯ ಪ್ರಶಸ್ತಿಗೆ ಸೊಲ್ಲಾಪುರದ ಬಿ.ಎ.ಜಮಾದಾರ್, ಕನಕ ಶ್ರೀ ಪ್ರಶಸ್ತಿಗೆ ಬೆಂಗಳೂರಿನ ದಾಸ ಸಾಹಿತ್ಯ ಸಂಶೋಧಕ ಡಾ.ಕೆ.ಗೋಕುಲನಾಥ್, ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ಮಂಡ್ಯದ ಜಿ.ಮಾದೇಗೌಡ, ಅಕ್ಕಮಹಾದೇವಿ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆ ಉಡುತಡಿಯ ಅಕ್ಕ ಮಹಾದೇವಿ ಸೇವಾ ಸಮಿತಿ ಆಯ್ಕೆಯಾಗಿವೆ. ಎಲ್ಲ ಪ್ರಶಸ್ತಿಗಳು ಮೂರು ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಪ್ರಶಸ್ತಿಯನ್ನು ಬನವಾಸಿಯಲ್ಲಿ ನಡೆಯಲಿರುವ ಕದಂಬೋತ್ಸವದಲ್ಲಿ ಪ್ರದಾನ ಮಾಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News