×
Ad

‘ಪರಿವರ್ತನಾ ಯಾತ್ರೆ’ ಮುಖ್ಯಮಂತ್ರಿ,ಸರಕಾರವನ್ನು ಬದಲಾಯಿಸಲು ಅಲ್ಲ: ಅಮಿತ್ ಶಾ

Update: 2017-11-02 18:58 IST

ಬೆಂಗಳೂರು, ನ. 2: ‘ಬಿಜೆಪಿ ಆರಂಭಿಸಿರುವ ನವ ಕರ್ನಾಟಕ ನಿರ್ಮಾಣ ‘ಪರಿವರ್ತನಾ ಯಾತ್ರೆ’ ಕರ್ನಾಟಕದ ಮುಖ್ಯಮಂತ್ರಿ, ಸರಕಾರ, ಸಚಿವರು- ಶಾಸಕರನ್ನು ಬದಲಿಸಲು ಅಲ್ಲ. ಬದಲಿಗೆ ಕೃಷಿ, ಯುವಕರ ಸ್ಥಿತಿ ಕಾನೂನು ಸುವ್ಯವಸ್ಥೆ ಬದಲಿಸಲು’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಇಲ್ಲಿನ ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಮೈದಾನದಲ್ಲಿ ಏರ್ಪಡಿಸಿದ್ದ ಪರಿವರ್ತನಾ ಯಾತ್ರೆಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಉತ್ತಮ ಆಡಳಿತವಿದೆ.ಆದರೆ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಭ್ರಷ್ಟಚಾರದಲ್ಲಿ ತೊಡಗಿದ್ದಲ್ಲದೆ, ಭ್ರಷ್ಟರಿಗೆ ರಕ್ಷಣೆ ನೀಡುವ ಕೆಲಸದಲ್ಲಿ ತೊಡಗಿದ್ದಾರೆ. ಇಂತಹ ಕಾಂಗ್ರೆಸ್ ಸರಕಾರವನ್ನು ಬುಡ ಸಮೇತ ಕಿತ್ತೆಸೆಯುವ ಉದ್ದೇಶದಿಂದ ಪರಿವರ್ತನಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಅನುದಾನ ದ್ವಿಗುಣ: ಸಿಎಂ ಸಿದ್ದರಾಮಯ್ಯ ಕೇಂದ್ರ, ಕರ್ನಾಟಕಕ್ಕೆ ಅನುದಾನ ನೀಡುತ್ತಿಲ್ಲ ಎಂಬ ಸುಳ್ಳು ಆರೋಪ ಮಾಡುತ್ತಿದ್ದಾರೆ. ಆದರೆ, ಮೋದಿ ನೇತೃತ್ವದ ಸರಕಾರ 2ಲಕ್ಷ ಕೋಟಿ ರೂ.ಅನುದಾನ ನೀಡಿದ್ದಾರೆ. ಆ ಪೈಕಿ ಸಿದ್ದರಾಮಯ್ಯ 1ಲಕ್ಷ ಕೋಟಿ ರೂ.ಹಣದ ಲೆಕ್ಕ ಕೊಟ್ಟಿದ್ದು, ಉಳಿದ ಹಣ ಭ್ರಷ್ಟರ ಪಾಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ನಾಡಹಬ್ಬ ಕನ್ನಡ ರಾಜ್ಯೋತ್ಸವ ಆಚರಣೆಗೆ ಸಿದ್ದರಾಮಯ್ಯನವರಿಗೆ ಉತ್ಸಾಹ ಇಲ್ಲ. ಆದರೂ, ಮುಸ್ಲಿಂ ಮತಬ್ಯಾಂಕ್ ರಾಜಕೀಯಕ್ಕಾಗಿ ನ.10ಕ್ಕೆ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಮುಂದಾಗಿದ್ದಾರೆ ಎಂದು ಟೀಕಿಸಿದ ಅವರು, ರಾಜ್ಯದಲ್ಲಿ ಆರೆಸೆಸ್ಸ್ ಕಾರ್ಯಕರ್ತರ ಕಗ್ಗೊಲೆಗಳು ನಡೆದಿವೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮನ್ನು ಹಿಂದುಳಿದ ವರ್ಗದವರ ನಾಯಕ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಕೇಂದ್ರ ಸರಕಾರ ಹಿಂದುಳಿದ ವರ್ಗಗಳ ಮಸೂದೆ ತರಲು ಮುಂದಾಗಿದ್ದ ವೇಳೆ ಕಾಂಗ್ರೆಸ್ ಆ ಮಸೂದೆಯನ್ನು ವಿರೋಧಿಸಿದರು ಎಂದು ಅಮಿತ್ ಶಾ ಟೀಕಿಸಿದರು.

224 ಕ್ಷೇತ್ರಗಳಿಗೂ ಭೇಟಿ: ರಾಜ್ಯದ ಪರಿಸ್ಥಿತಿ ಬದಲಾವಣೆ ದೃಷ್ಟಿಯಿಂದ ಬಿಜೆಪಿ ‘ಪರಿವರ್ತನಾ ಯಾತ್ರೆ’ ಹಮ್ಮಿಕೊಂಡಿದ್ದು, ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ ಒಟ್ಟು 80 ದಿನಗಳ ಕಾಲ ಸಂಚರಿಸಲಿದೆ ಎಂದು ಅವರು ತಿಳಿಸಿದರು.

ಕೇಸರಿ ವಾಹನ: ಯಾತ್ರೆಗಾಗಿ ಕೇಸರಿ ಬಣ್ಣದ ಹವಾನಿಯಂತ್ರಿತ ವ್ಯವಸ್ಥೆಯುಳ್ಳ ವಿಶೇಷ ವಾಹನ ಸಿದ್ಧಪಡಿಸಿದ್ದು, ಯಾತ್ರೆ ವೇಳೆ ಜನತೆಯನ್ನುದ್ದೇಶಿಸಿ ಮಾತನಾಡಲು ವೇದಿಕೆ, ಸಣ್ಣ ಅಡುಗೆ ಮನೆ ಸಹಿತ ನಾಲ್ಕೈದು ಮಂದಿ ಕೂತು ಮಾತನಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ಉಸ್ತುವಾರಿ ಮುರುಳಿಧರ್ ರಾವ್, ವಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಶೋಭಾ ಕರಂದ್ಲಾಜೆ, ಶ್ರೀರಾಮುಲು, ಪ್ರಹ್ಲಾದ್ ಜೋಶಿ, ಗೋವಿಂದ ಕಾರಜೋಳ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಯೋಗೇಶ್ವರ್-ರಾಜೀವ್ ಸೇರ್ಪಡೆ
ಕಾಂಗ್ರೆಸ್ ತೊರೆದಿದ್ದ ಶಾಸಕ ಸಿ.ಪಿ.ಯೋಗೇಶ್ವರ್, ಬಿಎರ್ಸ್ಸಾರ್ ಕಾಂಗ್ರೆಸ್ ಶಾಸಕ ಪಿ.ರಾಜೀವ್, ನಂದಿನಿಗೌಡ ಸೇರಿದಂತೆ ಹಲವು ಗಣ್ಯರು ಬಿಜೆಪಿ ಪರಿವರ್ತನಾ ಯಾತ್ರೆ ಉದ್ಘಾಟನೆ ಸಂದರ್ಭದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಕೃಷ್ಣ-ಪ್ರಸಾದ್ ಗೈರು: ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಹಾಗೂ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಸೇರಿದಂತೆ ಹಲವು ಗಣ್ಯರು ಪರಿವರ್ತನಾ ಯಾತ್ರೆ ಉದ್ಘಾಟನೆ ಸಮಾರಂಭದಲ್ಲಿ ಗೈರು ಹಾಜರಾಗಿದ್ದು ಎದ್ದು ಕಾಣುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News