ನಟ ಉಪೇಂದ್ರ ವಿರುದ್ಧ ಪೊಲೀಸರಿಗೆ ದೂರು
ಬೆಂಗಳೂರು, ನ.2:ಚುನಾವಣೆ ವೇಳೆ ಹಣ ಪಡೆಯಿರಿ ಎಂದು ಮತದಾರರಿಗೆ ಹಣದ ಆಮಿಷಕ್ಕೆ ಪ್ರಚೋದನೆ ನೀಡಿರುವುದಾಗಿ ಆರೋಪಿಸಿ ನಟ ಉಪೇಂದ್ರ ವಿರುದ್ಧ ಜೆಡಿಯು ಇಲ್ಲಿನ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗುರುವಾರ ನಗರದ ಶೇಷಾದ್ರಿ ಪುರಂ ಠಾಣಾ ಪೊಲೀಸರಿಗೆ ಜೆಡಿಯು ಕಾರ್ಯದರ್ಶಿ ಎನ್.ನಾಗೇಶ್ ಅವರು ನಟ ಉಪೇಂದ್ರ ವಿರುದ್ಧ ದೂರು ನೀಡಿ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎನ್.ನಾಗೇಶ್, ಅ.31ರಂದು ಬೆಂಗಳೂರಿನ ಗಾಂಧಿಭವನದಲ್ಲಿ ಕೆಪಿಜೆಪಿ ಪಕ್ಷ ಉದ್ಘಾಟನೆ ಸಮಾರಂಭದ ವೇಳೆ ಉಪೇಂದ್ರ ಭಾಷಣ ಮಾಡುವಾಗ "ಚುನಾವಣೆಯಲ್ಲಿ ಜನ ಹಣ ಪಡೆಯಲಿ ಅದು ಅವರದೇ ಹಣ ತಪ್ಪೇನಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.
ಹಣ ಪಡೆದು ಮತ ಹಾಕಲು ಪ್ರಚೋದಿಸುವುದನ್ನು ಮಾಧ್ಯಮಗಳ ಮುಂದೆಯೇ ಒಪ್ಪಿಕೊಳ್ಳುತ್ತಾರೆ. ಉಪೇಂದ್ರ ಅವರು ಮತದಾರರಿಗೆ ಪ್ರಚೋದನೆ ಉಂಟು ಮಾಡುವಂತೆ ಮಾತನಾಡಿದ್ದಾರೆ.ಅಲ್ಲದೆ, ಹಣದ ಆಮಿಷಕ್ಕೆ ತಮ್ಮ ಬೆಂಬಲವಿದೆ ಎಂಬುದಾಗಿ ಮಾತನಾಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಎಸಗಿದ ಅಪಚಾರ ಎಂದು ನಾಗೇಶ್ ದೂರಿದರು.
ಉಪೇಂದ್ರ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು.ಅದೇ ರೀತಿ, ಈ ಸಂಬಂಧ ಮುಖ್ಯ ಚುನಾವಣಾಧಿಕಾರಿಗಳಿಗೂ ದೂರ ನೀಡಿದ್ದು, ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲಾಗುವುದೆಂದು ಅವರು ತಿಳಿಸಿದರು.