ಬಿಜೆಪಿ ಎಂದರೆ 'ಭಾರತೀಯ ಭ್ರಷ್ಟ ಜನರ ಪಾರ್ಟಿ': ಉಗ್ರಪ್ಪ ಟೀಕೆ
ಬೆಂಗಳೂರು, ನ.2: ಬಿಜೆಪಿ ಅಧಿಕಾರ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಆರ್.ಅಶೋಕ್ ಕಾನೂನುಬಾಹಿರವಾಗಿ ಹಂಚಿಕೆ ಮಾಡಿರುವ ಬಗರ್‌ಹುಕುಂ ಭೂಮಿಯನ್ನು ಕೂಡಲೇ ರದ್ದು ಪಡಿಸಬೇಕು ಹಾಗೂ ಅವರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಗರದ ಪುರಭವನದ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ, ಆರ್.ಅಶೋಕ್ ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 10 ಸಾವಿರ ಕೋಟಿ ರೂ.ಗಳಷ್ಟು ಬೆಲೆ ಬಾಳುವ ಸುಮಾರು 2,400ಕ್ಕೂ ಅಧಿಕ ಭೂಮಿಯನ್ನು ಬಿಬಿಎಂಪಿ ಸದಸ್ಯರುಗಳಿಗೆ, ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರಿಗೆ ಹಾಗೂ ಕಾರ್ಪೋರೇಟ್ ಗಳಿಗೆ ಅಕ್ರಮವಾಗಿ ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಗ್ರಾಮಗಳಲ್ಲಿ ವಾಸವಿಲ್ಲದ ಮತ್ತು ನಿಯಮಗಳ ಅನ್ವಯ ಅರ್ಹತೆಯಿಲ್ಲದ 16 ಗ್ರಾಮಗಳಿಗೆ ಸಂಬಂಧಿಸಿದ 88 ಫಲಾನುಭವಿಗಳಿಗೆ 245 ಎಕರೆ, ಕರ್ನಾಟಕ ಭೂ ಕಂದಾಯ ಅಧಿನಿಯಮ ಅನ್ವಯ ನಮೂನೆ 50 ಮತ್ತು 53 ರಲ್ಲಿ ಅನಧಿಕೃತ ಸಾಗುವಳಿದಾರರ ಬಿಬಿಎಂಪಿಯ 18 ಕಿ.ಮೀ ವ್ಯಾಪ್ತಿಗೆ ಒಳಪಡುವ ಭೂಮಿಯನ್ನು ಸಕ್ರಮಗೊಳಿಸಲು ಅವಕಾಶವಿಲ್ಲ. ಆದರೂ ಕಾನೂನು ಬಾಹಿರಬಾಗಿ 62 ಗ್ರಾಮಗಳ 516 ಜನಕ್ಕೆ 215 ಎಕರೆ ಭೂಮಿಯನ್ನು ಸಕ್ರಮ ಮಾಡಿದ್ದಾರೆ ಎಂದು ಆರೋಪಿಸಿದರು.
ಭಾರತೀಯ ಭ್ರಷ್ಟ ಜನರ ಪಾರ್ಟಿ(ಬಿಜೆಪಿ): ಭಾರತೀಯ ಜನತಾ ಪಾರ್ಟಿಯವರು ಭ್ರಷ್ಟಾಚಾರ ಬಗ್ಗೆ ದಿನನಿತ್ಯ ಮಾತನಾಡುತ್ತಿದ್ದಾರೆ. ಆದರೆ, ಮೊದಲು ತಮ್ಮ ಒಳಗಿರುವ ಭ್ರಷ್ಟರನ್ನು ಹೊರಗೆ ಹಾಕಲಿ ಎಂದ ಅವರು, ಬಿಜೆಪಿಯು ಭಾರತೀಯ ಜನತಾ ಪಾರ್ಟಿ ಎನ್ನುವುದರ ಬದಲಿಗೆ ಭಾರತೀಯ ಭ್ರಷ್ಟ ಜನರ ಪಾರ್ಟಿ ಎಂದು ಹೆಸರು ಬದಲಿಸಿಕೊಳ್ಳಲಿ ಎಂದು ಟೀಕಿಸಿದರು.
ಬಿಜೆಪಿಯವರ ಮನ ಪರಿವರ್ತನೆಯಾಗಬೇಕು: ರಾಜ್ಯದ ‘ಜನರ ಮನ ಪರಿವರ್ತನೆಗಾಗಿ’ ಎಂಬ ಹೆಸರಿನಡಿ ಬಿಜೆಪಿ ಹಮ್ಮಿಕೊಂಡಿರುವ ಪರಿವರ್ತನಾ ರ್ಯಾಲಿಗೆ ತಿರುಗೇಟು ನೀಡಿದ ಉಗ್ರಪ್ಪ, ಮೊದಲು ಲೂಟಿ ಮಾಡಿದ ಜನರು ಪರಿವರ್ತನೆಯಾಗಬೇಕು ಹೊರತು, ಜನರಲ್ಲ. ರಾಜ್ಯದಲ್ಲಿ 2008 ರಿಂದ 2013 ರವರೆಗೆ ಲೂಟಿ ಯಾತ್ರೆ ಮಾಡಿದ ಬಿಜೆಪಿ ನಾಯಕರು, ಈಗ ಪರಿವರ್ತನಾ ಯಾತ್ರೆ ಎಂದು ಹೊರಟಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಆರ್.ಅಶೋಕ್ ನಡೆಸಿರುವ ಹಗರಣ ಇತ್ತೀಚಿನ ವರ್ಷಗಳ ಅತಿ ದೊಡ್ಡ ಭೂ ಹಗರಣವಾಗಿದ್ದು, ಇದು ರಾಜಕಾರಣಿಗಳು ಮತ್ತು ಅಧಿಕಾರಿಗಳು ಸೇರಿ ನಡೆಸಿರುವ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಹಾಗೂ ಕಾನೂನುಬಾಹಿರ ಕೃತ್ಯವಾಗಿದೆ. ಆದುದರಿಂದ ಕೂಡಲೇ ರಾಜ್ಯ ಸರಕಾರ ಸ್ವ ಇಚ್ಛೆಯಿಂದ ಕಾನೂನು ಕ್ರಮಕೈಗೊಳ್ಳಬೇಕು. ಜೊತೆಗೆ, ಅವರು ಮಂಜೂರು ಮಾಡಿರುವ ಭೂಮಿಯನ್ನು ಮುಟ್ಟುಗೋಲು ಹಾಕಿಕೊಂಡು ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಅನಧಿಕೃತ ಸಾಗುವಳಿ ಸಮೀಕರಣ ಸಮಿತಿ ಸದಸ್ಯರು, ಅಧಿಕಾರಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ ಅವರು, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕಾಗೋಡು ತಿಮ್ಮಪ್ಪಗೆ ದೂರು ನೀಡಲಿದ್ದಾರೆ. ಅಲ್ಲದೆ, ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕರು ಈ ಹಗರಣದ ಬಗ್ಗೆ ಧ್ವನಿ ಎತ್ತಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿಯ ಭ್ರಷ್ಟಾಚಾರವನ್ನು ಬಯಲಿಗೆಳೆದು ಅವರ ನಿಜಬಣ್ಣವನ್ನು ಜನರ ಮುಂದೆ ಇಡಲಾಗುವುದು. ಚುನಾವಣೆಯಲ್ಲಿ ಜನರು ಅವರಿಗೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದ ಅವರು, ಪರಿವರ್ತನಾ ಯಾತ್ರೆಯನ್ನು ಟೀಕಿಸಿದ ಗುಂಡೂರಾವ್, ಬಿಜೆಪಿಯ ಯಾರೂ ಪರಿವರ್ತನೆಯಾಗುವುದಿಲ್ಲ. ಬಿ.ಎಸ್.ಯಡಿಯೂರಪ್ಪ, ಮುರುಗೇಶ್ ನೀರಾಣಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಹಲವರು ಭ್ರಷ್ಟಾಚಾರದಲ್ಲಿ ಸಿಲುಕಿ ಅಧಿಕಾರ ಕಳೆದುಕೊಂಡಿದ್ದಾರೆ. ನೂರು ಯಾತ್ರೆ ಮಾಡಿದರೂ ಬಿಜೆಪಿಯವರು ಪರಿವರ್ತನೆಯಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ಪ್ರತಿಭಟನೆಯಲ್ಲಿ ಶಾಸಕ ಆರ್.ವಿ.ದೇವರಾಜ್, ಕಾಂಗ್ರೆಸ್ ಮುಖಂಡ ಎಂ. ನಾರಾಯಣಸ್ವಾಮಿ, ಮಹಿಳಾ ಘಟಕದ ಮುಖಂಡರಾದ ಡಾ.ನಾಗಲಕ್ಷ್ಮಿ, ವಿದ್ಯಾರ್ಥಿ ಘಟಕ ಮುಖಂಡ ಮಂಜುನಾಥ್ ಸೇರಿದಂತೆ ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ ಜಿಲ್ಲಾ ಸಮಿತಿಗಳ ಪದಾಧಿಕಾರಿಗಳು ಭಾಗವಹಿಸಿದ್ದರು.