×
Ad

ಪೆಟ್ರೋಲ್ ಕಳವು ಪ್ರಕರಣ: ನಾಲ್ವರ ಬಂಧನ

Update: 2017-11-03 17:46 IST

ಬೆಂಗಳೂರು, ನ.3: ಟ್ಯಾಂಕರ್‌ಗಳಿಂದ ಪೆಟ್ರೋಲ್-ಡೀಸಲ್ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 40.80 ಲಕ್ಷ ರೂ. ಮೌಲ್ಯದ 60 ಸಾವಿರ ಲೀಟರ್ ಡೀಸಲ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸಕೋಟೆಯ ದೇವನಗೊಂದಿ ವೆಂಕಟನಾದಯ್ಯ (30), ಹಾಸನದ ಕಾಳಮಾರನಹಳ್ಳಿಯ ಗುರುರಾಜ್ (37), ಕೋರವಂಗಲದ ಮಲ್ಲೇಶ್ (35), ಬಿ.ಎಸ್.ಕೆ 2ನೆ ಹಂತದ ಭವಾನಿ ನಗರದ ಗೋವಿಂದರಾಜು (41)ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಆರೋಪಿಗಳು ಗ್ಯಾಂಗ್ ಕಟ್ಟಿಕೊಂಡು ದೇವನಗೊಂದಿ, ಇನ್ನಿತರ ಕಡೆಗಳಲ್ಲಿ ರಸ್ತೆ ಪಕ್ಕ ಟ್ಯಾಂಕರ್ ನಿಲ್ಲಿಸಿ ಚಾಲಕರು ಮಲಗಿರುವ ವೇಳೆ ಡೀಸಲ್ ಹಾಗೂ ಪೆಟ್ರೋಲ್ ಕಳವು ಮಾಡುತ್ತಿದ್ದರು. ಒಂದು ವರ್ಷದಿಂದ ಆರೋಪಿಗಳು ಈ ಕತ್ಯದಲ್ಲಿ ತೊಡಗಿದ್ದು, ಕಳವು ಮಾಡಿದ ಡೀಸಲ್ ಹಾಗೂ ಪೆಟ್ರೋಲ್‌ನನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಮೇಡಹಳ್ಳಿಯ ಗಾಯಿತ್ರಿ ಟಿಂಬರ್‌ಯಾರ್ಡ್ ಹಿಂಭಾಗದಲ್ಲಿ ನಿಲ್ಲಿಸಿದ್ದ ಟ್ಯಾಂಕರ್‌ನಲ್ಲಿ ಪೆಟ್ರೋಲ್ ಕಳವು ಮಾಡುತ್ತಿದ್ದ ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಬಂಧಿತರಿಂದ 40.80ಲಕ್ಷ ರೂ. ಮೌಲ್ಯದ 60 ಸಾವಿರ ಲೀಟರ್ ಡೀಸಲ್‌ನ 3 ಟ್ಯಾಂಕರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಕತ್ಯವೆಸಗಲು ಟ್ಯಾಂಕರ್ ಲಾರಿಗಳ ಚಾಲಕರು ಶಾಮೀಲಾಗಿರುವ ಅನುಮಾನವಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News