×
Ad

100 ಸಿಸಿ ಒಳಗಿನ ದ್ವಿಚಕ್ರ ವಾಹನ ನಿಷೇಧಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದ ಹೈಕೋರ್ಟ್

Update: 2017-11-03 20:19 IST

ಬೆಂಗಳೂರು, ನ.3: ಹಿಂಬದಿ ಸೀಟು ಅಳವಡಿಸಿದ 100 ಮತ್ತು ಅದಕ್ಕಿಂತ ಕಡಿಮೆ ಸಿಸಿ ಸಾಮರ್ಥ್ಯದ ದ್ವಿಚಕ್ರ ವಾಹನಗಳ ನೋಂದಣಿ ನಿಷೇಧಿಸಿ ರಾಜ್ಯ ಸಾರಿಗೆ ಇಲಾಖೆ ಹೊರಡಿಸಿದ ಸುತ್ತೋಲೆಗೆ ಹೈಕೋರ್ಟ್ ಶುಕ್ರವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಸಾರಿಗೆ ಇಲಾಖೆಯು ಹೊರಡಿಸಿರುವ ಸುತ್ತೋಲೆ ರದ್ದುಪಡಿಸುವಂತೆ ಕೋರಿ ಟಿವಿಎಸ್ ಮೋಟಾರ್ ಕಂಪೆನಿ ಲಿಮಿಟೆಡ್ ಹಾಗೂ ಹೀರೋ ಮೋಟೊ ಕಾರ್ಪ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ಪೀಠವು, ಹಿಂಬದಿ ಸೀಟು ಅಳವಡಿಸಿದ 100 ಮತ್ತು ಅದಕ್ಕಿಂತ ಕಡಿಮೆ ಸಿಸಿ ಸಾಮರ್ಥ್ಯದ ದ್ವಿಚಕ್ರ ವಾಹನಗಳ ನೋಂದಣಿ ನಿಷೇಧಿಸುವ ಸಂಬಂಧ ಕರ್ನಾಟಕ ಮೋಟಾರು ವಾಹನ ಅಧಿನಿಯಮ 1989ರ 143(3)ಗೆ ತಿದ್ದುಪಡಿ ಮಾಡುವರೆಗೂ ಸುತ್ತೋಲೆಗೆ ತಡೆಯಾಜ್ಞೆ ನೀಡಿತು. ಜತೆಗೆ, ರಾಜ್ಯ ಸರಕಾರವು ತಿದ್ದುಪಡಿ ಮಾಡುವರೆಗೂ ಈ ಸುತ್ತೋಲೆಯನ್ನು ಜಾರಿ ಮಾಡಬಾರದು ಎಂದು ಸ್ಪಷ್ಟಪಡಿಸಿ ಮಧ್ಯಂತರ ಆದೇಶ ಮಾಡಿತು.

ಇದಕ್ಕೂ ಮುನ್ನ ಅರ್ಜಿ ವಿಚಾರಣೆ ವೇಳೆ ಕಂಪೆನಿಗಳ ಪರ ವಕೀಲರು ವಾದ ಮಂಡಿಸಿ, ಕರ್ನಾಟಕ ಮೋಟಾರು ವಾಹನ ಕಾಯ್ದೆ-1989ರ ಸೆಕ್ಷನ್ 143(3) ನಿಯಮ ರೂಪಿಸಿದ ಸರಕಾರ, ಹಿಂಬದಿ ಸೀಟು ಅಳವಡಿಸಿರುವ 100 ಹಾಗೂ ಅದಕ್ಕಿಂತ ಕಡಿಮೆ ಸಿಸಿಯ ದ್ವಿಚಕ್ರ ವಾಹನಗಳ ನೋಂದಣಿ ನಿಷೇಧಿಸಿ ಅ.13ರಂದು ಸುತ್ತೋಲೆ ಹೊರಡಿಸಿದೆ. ಆದರೆ, ಮೋಟಾರು ವಾಹನ ಕಾಯ್ದೆಯು ಕೇಂದ್ರ ಸರಕಾರದ ಕಾಯ್ದೆಯಾಗಿದೆ. ಇನ್ನೂ ಕೇಂದ್ರದ ಕಾಯ್ದೆಯಲ್ಲಿ ಸುರಕ್ಷಿತ ಕ್ರಮಗಳೊಂದಿಗೆ 100 ಸಿಸಿ ಸಾಮರ್ಥ್ಯದ ದ್ವಿಚಕ್ರ ವಾಹನಕ್ಕೆ ಹಿಂಬದಿ ಸೀಟು ಅಳವಡಿಸಲು ಅವಕಾಶವಿದೆ. ಮೇಲಾಗಿ ಅರ್ಜಿದಾರರ ಕಂಪೆನಿಗಳು ಕೇಂದ್ರ ಸರಕಾರದ ನಿಯಮಗಳಂತೆ ಎಲ್ಲ ಸುರಕ್ಷಿತ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

ರಾಜ್ಯ ಸರಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಅವರು ವಾದಿಸಿ, ಹೈಕೋರ್ಟ್ ನಿರ್ದೇಶನದ ಮೇರೆಗೆ ಸಾರಿಗೆ ಇಲಾಖೆಯು 100 ಮತ್ತು ಅದಕ್ಕಿಂತ ಕಡಿಮೆ ಸಿಸಿ ಸಾಮರ್ಥ್ಯದ ದ್ವಿಚಕ್ರ ವಾಹನಗಳಿಗೆ ಹಿಂಬದಿ ಸೀಟು ಅವಳಡಿಸಲು ನಿಷೇಧಿಸಿ ಸುತ್ತೋಲೆ ಹೊರಡಿಸಿದೆ ಹೊರತು ಸರಕಾರವೇ ಸ್ವಯಂ ಪ್ರೇರಣೆಯಿಂದ ಈ ಕ್ರಮ ಕೈಗೊಂಡಿಲ್ಲ. ಇಂತಹ ನಿಯಮ ರೂಪಿಸಲು ರಾಜ್ಯ ಸರಕಾರಕ್ಕೆ ಅಧಿಕಾರವಿದೆ. ಇದರಿಂದ ಈ ಕುರಿತು ಕರ್ನಾಟಕ ಮೋಟಾರು ವಾಹನ ಕಾಯ್ದೆ ಯ ಸೆಕ್ಷನ್ 143(3)ರ ತಿದ್ದುಪಡಿ ಮಾಡಲಾಗುವುದು ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕೇಂದ್ರ ಸರಕಾರದ ಮೋಟಾರು ವಾಹನಗಳ ಕಾಯ್ದೆಯಲ್ಲಿ 100 ಮತ್ತು ಅದಕ್ಕಿಂತ ಕಡಿಮೆ ಸಿಸಿಯ ಸಾಮರ್ಥ್ಯದ ದ್ವಿಚಕ್ರ ವಾಹನಕ್ಕೆ ಸುರಕ್ಷಿತ ಕ್ರಮಗಳೊಂದಿಗೆ ಹಿಂಬದಿ ಸೀಟು ಅಳವಡಿಸಲು ಅವಕಾಶವಿದೆ. ರಾಜ್ಯ ಸರಕಾರಕ್ಕೂ ಅರ್ಜಿದಾರರ ಕಂಪೆನಿಗಳು ಉತ್ಪಾದಿಸಿರುವ ದ್ವಿಚಕ್ರ ವಾಹನಗಳಲ್ಲಿ ಸುರಕ್ಷಿತ ಉಪಕರಣಗಳನ್ನು ಅಳವಡಿಸುವುದನ್ನು ಪರಿಶೀಲಿಸಲು ಅವಕಾಶವೂ ಇದೆ. ಇನ್ನು ರಾಜ್ಯ ಸರಕಾರವೇ ಈ ಕುರಿತು ತಿದ್ದುಪಡಿ ನಿಯಮ ರೂಪಿಸಲಿದೆ ಎಂದು ತಿಳಿಸಿರುವುದರಿಂದ ಸಾರಿಗೆ ಇಲಾಖೆ ಅ.13ರಂದು ಹೊರಡಿಸಿರುವ ಸುತ್ತೋಲೆಗೆ ತಡೆಯಾಜ್ಞೆ ನೀಡಲಾಗುತ್ತಿದೆ ಎಂದು ಮಧ್ಯಂತರ ಆದೇಶ ಹೊರಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News