ಉತ್ತಮ ಗುಣಮಟ್ಟದ ಹೆದ್ದಾರಿ, ಸೇತುವೆ ನಿರ್ಮಾಣಕ್ಕೆ ಆದ್ಯತೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ನ.3: ಜನರ ಅನುಕೂಲ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಗುಣಮಟ್ಟದ ಹೆದ್ದಾರಿ ಹಾಗೂ ಸೇತುವೆ ನಿರ್ಮಾಣದಲ್ಲಿ ಇಂಡಿಯನ್ ರೋಡ್ಸ್ ಕಾಂಗ್ರೆಸ್ ತೊಡಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ನಗರದ ಅರಮನೆ ಮೈದಾನದಲ್ಲಿರುವ ಗಾಯಿತ್ರಿ ವಿಹಾರದಲ್ಲಿ ಇಂಡಿಯನ್ ರೋಡ್ಸ್ ಕಾಂಗ್ರೆಸ್ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ ನ.3 ರಿಂದ 6 ರವರೆಗೆ ಹಮ್ಮಿಕೊಳ್ಳಲಾದ 78ನೆ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಮಾವೇಶವು 13 ವರ್ಷಗಳ ನಂತರ ರಾಜ್ಯದಲ್ಲಿ ನಡೆಯುತ್ತಿದ್ದು, ಇದರಲ್ಲಿ ಸುಮಾರು 3000 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಜನರ ಜೀವನಾಡಿಯಾಗಿರುವ ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಶ್ರಮಿಸುತ್ತಿದೆ ಎಂದು ಹೇಳಿದರು.
ಉತ್ತಮ ರಸ್ತೆ ಸಾರಿಗೆ ವ್ಯವಸ್ಥೆ ರಾಜ್ಯ ಹಾಗೂ ದೇಶಿಯ ಆರ್ಥಿಕ ಸುಧಾರಣೆಗೆ ಸಾಕ್ಷಿಯಾಗಿವೆ. ನಾವು ಹೆಚ್ಚು ಸುರಕ್ಷತೆಯ ಕಡೆ ಗಮನಹರಿಸುವುದು ಅವಶ್ಯಕ. ಭಾರತದ ಏಳಿಗೆಯಲ್ಲೂ ಇದು ಮುಖ್ಯ ಪಾತ್ರ ವಹಿಸಿದೆ ಎಂದ ಅವರು, ಐಟಿ ಹಬ್ ಎಂದೇ ಕರೆಯಲಾಗುವ ಬೆಂಗಳೂರು ಹಾಗೂ ರಾಜ್ಯದ ಇತರ ತಾಲ್ಲೂಕುಗಳಲ್ಲಿ ಸಾರಿಗೆ ವ್ಯವಸ್ಥೆ ಕಳೆದ ದಶಕಕ್ಕಿಂತಲೂ ಹೆಚ್ಚು ಅಭಿವೃದ್ಧಿ ಹೊಂದಿದೆ. ಉತ್ತಮ ಯೋಜನೆಗಳು ಜಾರಿಗೆ ಬಂದಿದೆ. ನುರಿತ ಇಂಜಿನಿಯರ್‌ಗಳು, ಒಳ್ಳೆಯ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು 1500 ಕಿ.ಮೀ.ರಸ್ತೆಯನ್ನು 601 ಕೋಟಿಗಳಲ್ಲಿ ಮೇಲ್ದರ್ಜೆಗೊಳಿಸಿದೆ. ವಿಶ್ವಬ್ಯಾಂಕ್ ಅನುದಾನದಿಂದ 2585 ಕಿ.ಮೀ.ಗಳ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಕಳೆದ ನಾಲ್ಕುವರೆ ವರ್ಷಗಳಿಂದ ರಾಜ್ಯ ಸರಕಾರ 10,920 ಕಿ.ಮೀ.ಹೆದ್ದಾರಿ ರಸ್ತೆಯನ್ನು 10,961 ಕೋಟಿ ರೂ.ಗಳಲ್ಲಿ ಹಾಗೂ 21,101 ಕಿ.ಮೀ. ರಸ್ತೆಗಳನ್ನು 8430 ಕೋಟಿ ರೂ.ಗಳಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಅಲ್ಲದೆ ಇನ್ನೂ ಹಲವಾರು ರಸ್ತೆ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಇಂಡಿಯನ್ ರೋಡ್ಸ್ ಕಾಂಗ್ರೆಸ್‌ನ ಅಧ್ಯಕ್ಷ ಎನ್.ಕೆ.ಪ್ರಧಾನ್ ಮಾತನಾಡಿ, ಭಾರತವು ವಿಶ್ವದಲ್ಲಿಯೇ ಅಧಿಕ ಸಂಪರ್ಕ ಸಾರಿಗೆ ಹೊಂದಿರುವ ಎರಡನೇ ರಾಷ್ಟ್ರವಾಗಿದೆ. ಈವರೆಗೆ ನಾವು 407 ಮಿಲಿಯನ್ ಕಿ.ಮೀ.ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. 2021ರ ವೇಳೆಗೆ ರಸ್ತೆ ಸಂಪರ್ಕ ಇನ್ನಷ್ಟು ಸುಧಾರಣೆ ಹೊಂದಲಿವೆ ಎಂದು ತಿಳಿಸಿದರು.
ರಸ್ತೆಗಳಲ್ಲಿ ಬಳಸುವ ಲೋಹ ಸ್ಲಾಬ್‌ಗಳಿಗೆ ಮಾರ್ಗ ಸೂಚಿಯನ್ನು ಮಾಡಿದ್ದೇವೆ. ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಬಳಸಿ ದೀರ್ಘ ಆಯುಷ್ಯವಿರುವ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದ್ದೇವೆ. ಸ್ಮಾರ್ಟ್ ಸಿಟಿಗಳ ಪರಿಕಲ್ಪನೆಯಲ್ಲಿ ಮುನ್ನುಗ್ಗುತ್ತಿದ್ದೇವೆ. ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಉತ್ತಮ ರಸ್ತೆಗಳ ನಿರ್ಮಾಣಕ್ಕೆ 16 ನಿಯಮಗಳನ್ನು ನಾವು ಪಾಲಿಸಬೇಕಿದೆ. ನಾವು ಇಂದು ಅನೇಕ ಸವಾಲುಗಳನ್ನು ದಿನನಿತ್ಯ ಎದುರಿಸುತ್ತಿದ್ದೇವೆ ಎಂದರು.
ಜಿಲ್ಲೆ-ಜಿಲ್ಲೆ, ತಾಲೂಕು-ತಾಲೂಕು ಸಂಪರ್ಕ ಕಲ್ಪಿಸುವ ಪ್ರಯತ್ನ ನಡೆಸುತ್ತಿವೆ. ಈ ಸರಕಾರದಲ್ಲಿ 30 ಸಾವಿರ ಕಿ.ಮೀ.ಉತ್ತಮ ಗುಣಮಟ್ಟದ ರಸ್ತೆಗಳು, 10 ಸಾವಿರ ಕಿ.ಮೀ.ರಾಜ್ಯ ಹೆದ್ದಾರಿಗಳು, 21 ಸಾವಿರ ಕಿ.ಮೀ.ಜಿಲ್ಲಾ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಪರಿಶಿಷ್ಟ ಜಾತಿ, ಪಂಗಡದ ಜನವಸತಿಗಳಿಗೆ ಒಟ್ಟು ಅನುದಾನದ ಶೇ.21ರಷ್ಟು ವ್ಯಯ ಮಾಡಿ ರಸ್ತೆ ನಿರ್ಮಾಣ ಮಾಡಲಾಗಿದೆ. ಒಟ್ಟಿನಲ್ಲಿ ಜನೋಪಯೋಗಿ ಕೆಲಸ ಮಾಡಲು ತಾವು ಬದ್ಧರಿರುವುದಾಗಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಎಂ.ಲಕ್ಷ್ಮಿನಾರಾಯಣ ಸ್ವಾಗತ ಕೋರಿದರು. ಇಂಡಿಯನ್ ರೋಡ್ಸ್ ಕಾಂಗ್ರೆಸ್ ಕಾರ್ಯದರ್ಶಿ ಎನ್.ಕೆ.ನಿರ್ಮಲ್, ಮಾಜಿ ಅಧ್ಯಕ್ಷ ಹೂರ್ವಲ್, ಶಾಸಕ ಡಾ.ಅಶ್ವಥ್‌ನಾರಾಯಣ ಹಾಗೂ ಸಂಸ್ಥೆಯ ಇತರ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಸಾಧಕರನ್ನು ಸನ್ಮಾನಿಸಲಾಯಿತು.