ಮಾದಕ ವಸ್ತು ಮಾರಾಟ: ಆರೋಪಿಯ ಬಂಧನ
ಬೆಂಗಳೂರು, ನ.3: ಮಾದಕವಸ್ತು ಓಪಿಯಂ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ಆರೋಪಿಯೊಬ್ಬನನ್ನು ಇಲ್ಲಿನ ಕೋಣನಕುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಪೇಟೆಯ ಗಾಣಿಗರ ಪೇಟೆಯ ಲಕ್ಷ್ಮಣ್ ಯಾನೆ ಲಕ್ಷ್ಮಣ್ ರಾಮ್ ಪಟೇಲ್(30) ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ.
ರಾಜಸ್ಥಾನದ ಜಾಲೂರು ಮೂಲದ ಆರೋಪಿಯು ಆರ್.ಬಿ.ಐ ಲೇಔಟ್ 5ನೆ ಮೈನ್ 2ನೆ ಕ್ರಾಸ್ ಖಾಲಿ ನಿವೇಶನ ಬಳಿ ಓಪಿಯಂ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಮಾಹಿತಿ ಸಂಗ್ರಹಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಯಿಂದ 44 ಗ್ರಾಂ ತೂಕದ ಓಪಿಯಂ, ಮೊಬೈಲ್, 500 ರೂ. ನಗದು ಸೇರಿ 50 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ.ಎಸ್.ಡಿ.ಶರಣಪ್ಪಅವರು ತಿಳಿಸಿದ್ದಾರೆ.
ಆರೋಪಿಯು ಮಾದಕ ವಸ್ತು ಓಪಿಯಂ ಅನ್ನು ಪರಿಚಯವಿರುವ ರಾಜಸ್ಥಾನದ ವ್ಯಕ್ತಿಯೊಬ್ಬನಿಂದ ತಂದು ಅದನ್ನು ಚಿಕ್ಕ ಚಿಕ್ಕ ಪ್ಯಾಕ್ ಮಾಡಿ ಬೆಂಗಳೂರಿನಲ್ಲಿ ಪರಿಚಯವಿರುವ ವ್ಯಕ್ತಿಗಳಿಗೆ ಮಾರಾಟ ಮಾಡಿ ಹಣ ಗಳಿಸುತ್ತಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.