ಸಮರ್ಥನೀಯ ಪರೀಕ್ಷೆ ಮೂಲಕ ಪದವಿ ಮಾನ್ಯತೆ ನೀಡಲು ಆಗ್ರಹ
ಬೆಂಗಳೂರು, ನ.3: ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದು ಅತಂತ್ರ ಸ್ಥಿತಿಯಲ್ಲಿರುವ ವಿದ್ಯಾರ್ಥಿಗಳಿಗೆ ಸಮರ್ಥನೀಯ ಪರೀಕ್ಷೆ ನೀಡಿ, ಅದರಲ್ಲಿ ಉತ್ತೀರ್ಣರಾದವರಿಗೆ ಪದವಿ ಮಾನ್ಯತೆ ನೀಡಬೇಕು ಎಂದು ಕರ್ನಾಟಕ ವಿಶ್ವವಿದ್ಯಾನಿಲಯಗಳ ನಿವೃತ್ತ ಕುಲಪತಿಗಳ ವೇದಿಕೆ ಸಲಹೆ ನೀಡಿದೆ.
ಯುಜಿಸಿ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ್ದರಿಂದ ಕಳೆದ 2015 ರಲ್ಲಿ ಮುಕ್ತ ವಿಶ್ವವಿದ್ಯಾನಿಲಯದ ಮಾನ್ಯತೆಯನ್ನು ರದ್ದು ಮಾಡಲಾಗಿತ್ತು. ಇದರಿಂದಾಗಿ 2013 ರಿಂದ 2015 ರವರೆಗೆ ಮೂರು ಲಕ್ಷ ವಿದ್ಯಾರ್ಥಿಗಳು ಪಡೆದ ಪದವಿ ಮತ್ತು ಡಿಪ್ಲೊಮೋ ಪ್ರಮಾಣ ಪತ್ರಗಳು ಅಮಾನ್ಯಗೊಂಡಿವೆ. ಹೀಗಾಗಿ, ಈ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಇವರಿಗೆ ನೀಡಿದ ಪದವಿ ಪತ್ರಗಳಿಂದ ಉದ್ಯೋಗ ಮತ್ತು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಆದುದರಿಂದ ರಾಜ್ಯ ಸರಕಾರ ಯುಜಿಸಿ ಒಪ್ಪಿಗೆ ಪಡೆದು ಇದೇ ವಿಶ್ವವಿದ್ಯಾನಿಲಯದ ಮೂಲಕ ಅಥವಾ ಯುಜಿಸಿ ಗುರುತಿಸುವ ನಂಬಿಕೆಗೆ ಅರ್ಹವಾದ ಸಮರ್ಥನೀಯ ಪರೀಕ್ಷೆ ನಡೆಸಲು ಅರ್ಹತೆಯಿರುವ ಯಾವುದಾದರೂ ಬಾಹ್ಯ ಸಂಸ್ಥೆಯೊಂದಿಗೆ ಸಮರ್ಥನೀಯ ಪರೀಕ್ಷೆ ನಡೆಸಬೇಕು.
ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾತ್ರ ಪದವಿ ಪ್ರಮಾಣ ಪತ್ರ ನೀಡಬೇಕು. ಪದವಿ ಪೂರ್ವ ವಿದ್ಯಾರ್ಥಿಗಳಿಗೆ ನಡೆಸುವ ಸ್ಲೆಟ್ ಮತ್ತು ನೀಟ್ ಪರೀಕ್ಷೆ ಮಾದರಿಯಲ್ಲಿ ಈ ಪರೀಕ್ಷೆಯನ್ನು ನಡೆಸಬೇಕು ಎಂದು ವೇದಿಕೆ ಕಾರ್ಯದರ್ಶಿ ಡಾ.ಆರ್.ಎನ್.ಶ್ರೀನಿವಾಸಗೌಡ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.