ನ.6ರವರೆಗೆ ಇಂಡಿಯನ್ ರೋಡ್ಸ್ ಕಾಂಗ್ರೆಸ್ ಸಮಾವೇಶ: ಲಕ್ಷ್ಮಿನಾರಾಯಣ
ಬೆಂಗಳೂರು, ನ.3: ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದಿನಿಂದ ನವೆಂಬರ್ 6 ರವರೆಗೆ ಇಂಡಿಯನ್ ರೋಡ್ಸ್ ಕಾಂಗ್ರೆಸ್(ಐಆರ್‌ಸಿ)ನ 78ನೆ ವಾರ್ಷಿಕ ಅಧಿವೇಶನವನ್ನು ಏರ್ಪಡಿಸಲಾಗಿದೆ ಎಂದು ಲೋಕೋಪಯೋಗಿ, ಬಂದರು, ಒಳನಾಡು ಜಲಸಾರಿಗೆ ಇಲಾಖೆಯ ಸರಕಾರದ ಅಪರ ಮುಖ್ಯಕಾರ್ಯದರ್ಶಿ ಎಂ.ಲಕ್ಷ್ಮಿನಾರಾಯಣ ತಿಳಿಸಿದರು.
ಶುಕ್ರವಾರ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಇಂಡಿಯನ್ ರೋಡ್ಸ್ ಕಾಂಗ್ರೆಸ್ ಅಧಿವೇಶನ ಕುರಿತು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ರಸ್ತೆ, ಸೇತುವೆ, ಸುರಂಗಗಳ ನಿರ್ಮಾಣ ಮತ್ತು ನಿರ್ವಹಣೆ ಹಾಗೂ ತಂತ್ರಜ್ಞಾನ, ಉಪಕರಣ, ಸಂಶೋಧನೆ, ಯೋಜನೆ, ಹಣಕಾಸು, ತೆರಿಗೆ ಸೇರಿದಂತೆ ರಸ್ತೆ ಸಾರಿಗೆಗೆ ಸಂಬಂಧಿಸಿದ ಎಲ್ಲ ಬಗೆಯ ವಿಷಯಗಳ ಕುರಿತು ಜ್ಞಾನವನ್ನು ಹಂಚಿಕೊಳ್ಳುವ ಮತ್ತು ಅನುಭವಗಳನ್ನು ಕ್ರೋಢೀಕರಿಸುವುದಕ್ಕೆ ಈ ಸಮಾವೇಶ ಒಂದು ರಾಷ್ಟ್ರೀಯ ವೇದಿಕೆಯಾಗಿದೆ ಎಂದು ಹೇಳಿದರು.
ಶುದ್ಧವಾದ, ಮಿತ ಶಕ್ತಿ ವ್ಯಯದ ಮತ್ತು ಕಡಿಮೆ ಮಾಲಿನ್ಯಕಾರಕ ವಿಧಾನಗಳನ್ನು ಉತ್ತೇಜಿಸಲು ಪರಿಸರ ಪೂರಕ ತಂತ್ರಜ್ಞಾನಗಳ ಉಪಕ್ರಮಗಳನ್ನು ಬಳಸಲು ಹಾಗೂ ನೈಸರ್ಗಿಕ ಸಂಪನ್ಮೂಲಗಳ ಬಳಕೆಯನ್ನು ಮಿತಿಗೊಳಿಸಲು, ಬಳಸಿದ ವಸ್ತುಗಳ ಮರುಬಳಕೆಯನ್ನು ಪ್ರೋತ್ಸಾಹಿಸಲು ಐಆರ್‌ಸಿ ಬದ್ಧವಾಗಿದೆ ಎಂದರು.
ರಸ್ತೆಗಳ ಯೋಜನೆ, ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆಯಂತಹ ವಿವಿಧ ಮುಖಗಳ ಗಮನಾರ್ಹ ಸುಧಾರಣೆಗೆ ಐಆರ್‌ಸಿ ಮಹತ್ವದ ಕೊಡುಗೆ ನೀಡಿದೆ. ಕೇಂದ್ರ ಸರಕಾರವು ರಾಜ್ಯಾದ್ಯಂತ ರಸ್ತೆಗಳ ಅಭಿವೃದ್ಧಿಯ ಉದ್ದೇಶದಿಂದ ಸ್ಥಾಪಿಸಲಾದ ಐಆರ್‌ಸಿಯನ್ನು 1934 ರಲ್ಲಿ ಸ್ಥಾಪಿಸಲಾಯಿತು ಎಂದು ಅವರು,
ರಸ್ತೆಗಳ ಯೋಜನೆ, ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆಯಂತಹ ವಿವಿಧ ಮುಖಗಳ ಗಮನಾರ್ಹ ಸುಧಾರಣೆಗೆ ಐಆರ್‌ಸಿ ಮಹತ್ವದ ಕೊಡುಗೆ ನೀಡಿದೆ. ಕೇಂದ್ರ ಸರಕಾರವು ರಾಜ್ಯಾದ್ಯಂತ ರಸ್ತೆಗಳ ಅಭಿವೃದ್ಧಿಯ ಉದ್ದೇಶದಿಂದ ಐಆರ್‌ಸಿಯನ್ನು ಸ್ಥಾಪಿಲಾಯಿತು ಎಂದು ತಿಳಿಸಿದರು.
ಕಳೆದ 78 ವರ್ಷಗಳಲ್ಲಿ ಹಲವಾರು ಗಮನಾರ್ಹ ಸಾಧನೆಯನ್ನು ಐಆರ್‌ಸಿ ಮಾಡಿದೆ. ಈ ಅಧಿವೇಶನದಲ್ಲಿ ರಾಜ್ಯ, ರಾಷ್ಟ್ರ ಮತ್ತು ವಿದೇಶಗಳ 3000ಕ್ಕೂ ಹೆಚ್ಚು ಅಧಿಕ ಹೆದ್ದಾರಿ ಇಂಜಿನಿಯರ್‌ಗಳು ಮತ್ತು ತಜ್ಞರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐಆರ್‌ಸಿ ಅಧ್ಯಕ್ಷ ಎನ್.ಕೆ.ಪ್ರಧಾನ್, ಇಂದಿನ ಹೊಸ ತಂತ್ರಜ್ಞಾನದ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶವಾಗಿದೆ. ಇದಕ್ಕೆ ವಿವಿಧ ಇಲಾಖೆಗಳ ಸಹಯೋಗ ಪಡೆಯುತ್ತಿದ್ದೇವೆ. ಅಕ್ರಮ ವ್ಯವಸ್ಥೆಯನ್ನು ಸರಿಪಡಿಸಿ ಜನರಿಗೆ ಉತ್ತಮ ರಸ್ತೆಗಳನ್ನು ನೀಡುವುದು ನಮ್ಮ ಪ್ರಾಧಾನ್ಯತೆಯಾಗಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಐಆರ್‌ಸಿ ಕಾರ್ಯದರ್ಶಿ ನಿರ್ಮಲ್, ಮಾಜಿ ಅಧ್ಯಕ್ಷ ಡಾ.ಹೂರ್ವಲ್ ಹಾಗೂ ಇತರರು ಉಪಸ್ಥಿತರಿದ್ದರು.