×
Ad

ಪ್ರಿಯಕರನ ಕೊಲೆ ಪ್ರಕರಣ: ಮಹಿಳೆ ಬಂಧನ

Update: 2017-11-04 18:17 IST

ಬೆಂಗಳೂರು, ನ.4: ತನ್ನ ಶೀಲದ ಬಗ್ಗೆ ಅನುಮಾನಿಸಿದ್ದ ಪ್ರಿಯಕರನ ಕತ್ತು ಹಿಸುಕಿ ಕೊಂದು ರಸ್ತೆಯಲ್ಲಿ ಶವವನ್ನು ಎಸೆದು ಪರಾರಿಯಾಗಿದ್ದ ಮಹಿಳೆಯನ್ನು ಇಲ್ಲಿನ ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮುತ್ತುರಾಜು(26) ಎಂಬಾತನನ್ನು ಕೊಂದ ಆರೋಪದ ಮೇಲೆ ಸುನಂದಾಬಾಯಿ ಯಾನೆ ಸುನಂದಾ(30) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ: ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗಣಪತಿಪುರದ 6ನೆ ಮುಖ್ಯ ರಸ್ತೆಯಲ್ಲಿ ಅ.30ರಂದು ಅಪರಿಚಿತ ಯುವಕನೊಬ್ಬನ ಶವ ಪತ್ತೆಯಾಗಿತ್ತು. ರಸ್ತೆಯಲ್ಲಿ ದೊರೆತ ಶವ ಉತ್ತರಹಳ್ಳಿ ನಿವಾಸಿ ಮುತ್ತುರಾಜು ಎಂಬಾತನದ್ದು ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂತು.

ಈ ಸಂಬಂಧ ದೂರು ನೀಡಿದ್ದ ಮುತ್ತರಾಜು ತಾಯಿ, ಮಗ ಖಾಸಗಿ ಬಸ್ ನಿರ್ವಾಹಕನಾಗಿದ್ದ, ಮದ್ಯಪಾನ ಸೇವನೆ ಮಾಡುತ್ತಿದ್ದ, ಗಣಪತಿಪುರದಲ್ಲಿನ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎಂದು ಉಲ್ಲೇಖಿಸಿದ್ದರು. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಮರಣೋತ್ತರ ಪರೀಕ್ಷೆಯಿಂದ ಇದು ಉಸಿರುಗಟ್ಟಿಸಿ ಮಾಡಿರುವ ಕೊಲೆ ಎಂಬ ವಿಷಯ ತಿಳಿದು ಬಂತು.

ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸಿ ಮೊಬೈಲ್ ಮಾಹಿತಿ ಕರೆ ದಾಖಲೆಗಳನ್ನು ಪರಿಶೀಲಿಸಿದರು. ಅಲ್ಲದೇ, ಶವ ಪತ್ತೆಯಾದ 6ನೆ ಮುಖ್ಯರಸ್ತೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಯನ್ನು ಕಲೆ ಹಾಕಿ ತನಿಖೆ ಮುಂದುವರಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿ ಸುನಂದಾ ಖಾಸಗಿ ಶಾಲೆಯೊಂದರಲ್ಲಿ ಆಯಾ ಆಗಿ ಕಾರ್ಯನಿರ್ವಹಿಸುತ್ತಿದ್ದು, ಪತಿ ಒಂದು ವರ್ಷದ ಹಿಂದೆ ನಿಧನರಾಗಿದ್ದರು. ಮುತ್ತುರಾಜನ ಪರಿಚಯವಾಗಿ ಅವರಿಬ್ಬರು ಪರಸ್ಪರ ಒಪ್ಪಿಗೆಯಿಂದ ಸಹ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಧ್ಯೆ, ಸುನಂದಾಳ ಶೀಲ ಶಂಕಿಸಿ ಪಾನಮತ್ತ ಮುತ್ತುರಾಜು ಪದೇ ಪದೇ ಗಲಾಟೆ ಮಾಡುತ್ತಿದ್ದ. ಇದರಿಂದ ಬೇಸತ್ತ ಆಕೆ ತನ್ನ ಮನೆಯಲ್ಲಿ ಪ್ಲಾಸ್ಟಿಕ್ ಹಗ್ಗದಿಂದ ಆತನ ಕುತ್ತಿಗೆ ಬಿಗಿದು ಕೊಲೆ ಮಾಡಿದಳು. ನಂತರ ಸಾಕ್ಷ್ಯಾಧಾರಗಳನ್ನು ನಾಶಪಡಿಸಲು ಶವವನ್ನು ಬೆಡ್‌ಶಿಟ್‌ನಲ್ಲಿ ಸುತ್ತಿ ರಸ್ತೆಯಲ್ಲಿ ಎಸೆದಿದ್ದಳು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ. ಎಸ್.ಡಿ.ಶರಣಪ್ಪ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News