ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಯಾದವರಿಗೆ ಶಾಶ್ವತವಾಗಿ ಚುನಾವಣೆಗೆ ಸ್ಪರ್ಧಿಸಲು ಅನರ್ಹಗೊಳಿಸಿ: ಕೋದಂಡರಾಮಯ್ಯ
ಬೆಂಗಳೂರು, ನ.4: ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ 2 ವರ್ಷಕ್ಕಿಂತ ಹೆಚ್ಚು ಕಾಲ ಶಿಕ್ಷೆಗೆ ಒಳಗಾದ ರಾಜಕಾರಣಿಗಳಿಗೆ ಶಾಶ್ವತವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಳಿಸುವ ಕಾಯ್ದೆ ಜಾರಿ ಮಾಡಬೇಕು ಎಂದು ಮಾಜಿ ಸಂಸದ ಪಿ.ಕೋದಂಡರಾಮಯ್ಯ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಶಿಕ್ಷೆಗೆ ಒಳಪಟ್ಟ ರಾಜಕಾರಣಿಗಳಿಗೆ ಮುಂದೆಂದೂ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಲು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ. ಈ ಸಂಬಂಧ ಕೇಂದ್ರ ಚುನಾವಣಾ ಆಯೋಗವೂ ಅಂತಹ ಅಭ್ಯರ್ಥಿಗಳನ್ನು ಅನರ್ಹಗೊಳಿಸುವಂತೆ ಶಿಫಾರಸು ಮಾಡಿರುವುದು ಸ್ವಾಗತಾರ್ಹ ಎಂದರು.
2013 ರಲ್ಲಿ ಸುಪ್ರೀಂಕೋರ್ಟ್ ಎಲ್ಲ ರಾಜ್ಯಗಳ ಹೈಕೋರ್ಟ್‌ಗಳಿಗೆ ಆದೇಶ ನೀಡಿ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಜನಪ್ರತಿನಿಧಿಗಳ ಪ್ರಕರಣಗಳನ್ನು ಒಂದು ವರ್ಷದೊಳಗೆ ಇತ್ಯರ್ಥಪಡಿಸಬೇಕು. ಆ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದೆ. ಆದರೆ, ಇದುವರೆಗೂ ಯಾವುದೇ ರಾಜ್ಯಗಳಲ್ಲಿ ಈ ಆದೇಶವನ್ನು ಪಾಲಿಸಿಲ್ಲ. ಈ ಕುರಿತು ಸುಪ್ರೀಂಕೋರ್ಟ್ ಸಹ ಯಾವುದೇ ವರದಿ ಪಡೆದುಕೊಂಡಿಲ್ಲ ಎಂದು ಹೇಳಿದರು.
ಮಾಜಿ ಸಭಾಪತಿ ಕೃಷ್ಣ ಮಾತನಾಡಿ, ಭ್ರಷ್ಟಾಚಾರದ ನಿರ್ಮೂಲನೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಹೇಳುತ್ತಿವೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಧಾನಿ ನರೇಂದ್ರಮೋದಿ ಭ್ರಷ್ಟಾಚಾರದ ಪ್ರಧಾನ ಪೋಷಕರಾಗಿದ್ದಾರೆ. ಕೇಂದ್ರದಲ್ಲಿರುವ ಸರಕಾರ ಜನಲೋಕಪಾಲ್ ಬಿಲ್ ಜಾರಿ ಮಾಡಲು ಹಿಂದೇಟು ಹಾಕುತ್ತಿದೆ. ಮತ್ತೊಂದು ಕಡೆ, ರಾಜ್ಯದಲ್ಲಿ ಲೋಕಾಯುಕ್ತವನ್ನು ಎಸಿಬಿಯಾಗಿ ಬದಲಿಸಿಕೊಂಡಿದ್ದಾರೆ. ಇದರಿಂದ ಯಾವ ಭ್ರಷ್ಟಾಚಾರವನ್ನು ನಿಯಂತ್ರಿಸಲು ಮುಂದಾಗಿದ್ದಾರೆ ಎಂದು ಪ್ರಶ್ನಿಸಿದರು.
ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಹಲವು ಭ್ರಷ್ಟರನ್ನು ಲೋಕಾಯುಕ್ತ ಅಸ್ತಿತ್ವದಲ್ಲಿದ್ದ ವೇಳೆ ಹಿಡಿದುಕೊಟ್ಟಿತ್ತು. ಆದರೆ, ರಾಜ್ಯ ಸರಕಾರ ಅವರನ್ನು ಪರೋಕ್ಷವಾಗಿ ರಕ್ಷಿಸಿದೆ ಎಂದ ಅವರು, ಚುನಾವಣೆಗಳಲ್ಲಿ ಸಾಮಾನ್ಯ ಅಪರಾಧ ಹೊಂದಿರುವವರಿಗೆ ಸ್ಪರ್ಧೆಗೆ ಅವಕಾಶ ಕಲ್ಪಿಸಬಹುದು. ಆದರೆ, ಘೋರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಯು ಮುಖಂಡ ಜಿ.ಕೆ.ಸಿ.ರೆಡ್ಡಿ, ಸಮಾಜವಾದಿ ಪಕ್ಷದ ರಾಬಿನ್ ಮ್ಯಾಥ್ಯೂ, ಜೆಡಿಯು ಕಾರ್ಯದರ್ಶಿ ರಾಮಚಂದ್ರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.