×
Ad

ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಅಂತ್ಯ

Update: 2017-11-04 20:08 IST

ಬೆಂಗಳೂರು, ನ.4: ಸಾರಿಗೆ ನೌಕರರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಶನ್ ವತಿಯಿಂದ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿ ಎದುರು ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಅಂತ್ಯಗೊಳಿಸಲಾಗಿದೆ.

ನ.2 ರಿಂದ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮುಷ್ಕರ ಆರಂಭಿಸಲಾಗಿತ್ತು. ನ.3 ರಂದು ಕಾರ್ಮಿಕರನ್ನು ಬಂಧಿಸಿ, ಬಿಡುಗಡೆಗೊಳಿಸಿದ್ದರು. ಅನಂತರ ಸ್ವಾತಂತ್ರ ಉದ್ಯಾನವನದಲ್ಲಿ ಸಾರಿಗೆ ನೌಕರರು ಧರಣಿಯನ್ನು ಮುಂದುವರಿಸಿದ್ದರು. ಹೀಗಾಗಿ, ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಬಿಎಂಟಿಸಿ ನಿಗಮದ ಅಧ್ಯಕ್ಷ ನಾಗರಾಜ್ ಯಾದವ್ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರಿಂದ ಧರಣಿ ಹಿಂಪಡೆಯಲಾಗಿದೆ.

ಬೇಡಿಕೆಗಳು:
-ಬೇರೆ ಬೇರೆ ವಿಭಾಗಗಳಿಂದ ಕೂಡಲೇ ವರ್ಗಾವಣೆ ನೀಡಬೇಕು.
-ಬಿಎಂಟಿಸಿ ನೌಕರರಿಗೆ ಬಾಕಿಯಿರುವ 2015-16 ನೆ ಸಾಲಿನ ಬೋನಸ್ ಹಣ ನೀಡುವುದು.
-ರಾಜ್ಯದ ನಾಲ್ಕು ನಿಗಮಗಳ ಕಾರ್ಮಿಕರಿಗೆ ನೀಡಬೇಕಾದ 2016-17 ನೆ ಸಾಲಿನ ಬೋನಸ್ ಹಣ ನೀಡಬೇಕು.
-ಕಾರ್ಮಿಕ ಸಂಘಗಳ ಚುನಾವಣೆ ನಡೆಸಬೇಕು.
-ಘಟಕ, ವಿಭಾಗ, ಕೇಂದ್ರ ಕಚೇರಿ ಮಟ್ಟದಲ್ಲಿ ಕಾರ್ಮಿಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಬಗೆಹರಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಸಚಿವರಿಗೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News