ಅ.9ರಂದು ಕನಕದಾಸರ ಸಚಿತ್ರ ಕಥಾ ಮಾಲಿಕೆ ಬಿಡುಗಡೆ
ಬೆಂಗಳೂರು, ನ.4: ರಾಷ್ಟ್ರೀಯ ಸಂತ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಅ. 9 ರಂದು ಬೆಳಗ್ಗೆ 10.30ಕ್ಕೆ ನಗರದ ನಯನ ಸಭಾಂಗಣದಲ್ಲಿ ’ಕನಕದಾಸರ ಸಚಿತ್ರ ಕಥಾ ಮಾಲಿಕೆ’ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿದೆ.
ಮಕ್ಕಳಿಗಾಗಿ ಸಿದ್ಧಪಡಿಸಿರುವ ’ಕನಕದಾಸರ ಸಚಿತ್ರ ಕಥಾ ಮಾಲಿಕೆ’ ಕನಕದಾಸರ ಜೀವನ ಮತ್ತು ಅವರ ನಾಲ್ಕು ಕಾವ್ಯಗಳನ್ನೊಳಗೊಂಡ ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತ್ರೆ, ಹರಿಭಕ್ತಿಸಾರ ಹಾಗೂ ಕೀರ್ತನೆಗಳನ್ನು ಚಿತ್ರಗಳ ಮೂಲಕ ಕಥಾನಕದ ರೂಪದಲ್ಲಿ ಹೊರತರುತ್ತಿರುವುದು ಚಿತ್ರ ಕಥಾ ಮಾಲಿಕೆಯ ಆಶಯವಾಗಿದೆ.
ಜೀವನ ಸಾಹಿತ್ಯ ಹಾಗೂ 5 ಗ್ರಂಥಗಳನ್ನು ಪರಿಚಯಿಸುವ ನೆಲೆಯಲ್ಲಿ ಸಂಭಾಷಣಾ ರೂಪದಲ್ಲಿ ಒಬ್ಬೊಬ್ಬ ವಿದ್ವಾಂಸರಿಂದ ಸಾಹಿತ್ಯವನ್ನು ಸಿದ್ಧಪಡಿಸಲಾಗಿದೆ. ಈ ಸಂಭಾಷಣಾ ಸಾಹಿತ್ಯಕ್ಕೆ ಹಿರಿಯ ಚಿತ್ರಕಲಾವಿದರಾದ ಬಿ.ಜಿ.ಗುಜ್ಜಾರಪ್ಪಮತ್ತು ತಂಡ ಚಿತ್ರಗಳನ್ನು ರಚಿಸಿದೆ. ಪ್ರತಿ ಗ್ರಂಥವು ಬಹುವರ್ಣಗಳಲ್ಲಿ ಮುದ್ರಣಕ್ಕಾಗಿ ಮಕ್ಕಳಿಗೆ ಆಕರ್ಷಕ ರೀತಿಯಲ್ಲಿ ಕನಕದಾಸರ ಬಗ್ಗೆ ಅರಿವುಂಟು ಮಾಡುವ ಪ್ರಕಟನೆ ಇದಾಗಿದೆ.
ಒಟ್ಟು ಆರು ಕೃತಿಗಳನ್ನು ಆರು ಜನ ವಿದ್ಯಾರ್ಥಿಗಳು ಬಿಡುಗಡೆ ಮಾಡುತ್ತಾರೆ. ಉಳಿದ ವಿದ್ಯಾರ್ಥಿಗಳೂ ಈ ಚರ್ಚೆಯಲ್ಲಿ ಭಾಗವಹಿಸಲಿದ್ದು, ವಿದ್ಯಾರ್ಥಿಗಳು ಸಂವಾದದಲ್ಲಿ ಸಕ್ರಿಯವಾಗಿ ಭಾಗವಹಿಸಲು ಅನುಕೂಲವಾಗುವಂತೆ ಆಯ್ಕೆಮಾಡಿರುವ ಎಲ್ಲ ವಿದ್ಯಾರ್ಥಿಗಳಿಗೆ ಮುಂಚಿತವಾಗಿ ಆರು ಪುಸ್ತಕಗಳ ಸೆಟ್‌ನ್ನು ಕಳುಹಿಸಲಾಗಿದೆ.
ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ ವಿನ್ಯಾಸಗೊಳಿಸಿರುವ ಈ ಕಾರ್ಯಕ್ರಮಕ್ಕೆ ಸರಕಾರಿ ಪ್ರೌಢ ಶಾಲೆ, ಬೆಂಗಳೂರು ಮಹಾನಗರ ಪಾಲಿಕೆಯ ಪ್ರೌಢಶಾಲೆ ಮತ್ತು ಖಾಸಗಿ ಪ್ರೌಢ ಶಾಲೆಗಳನ್ನೊಳಗೊಂಡಂತೆ ಸುಮಾರು 12 ಶಾಲೆಗಳಿಂದ 145 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.