×
Ad

ಮಹಿಳೆಯರನ್ನು ಅಡುಗೆ ಮನೆಗೆ ಸೀಮಿತಗೊಳಿಸಿರುವ ಬಿಜೆಪಿ: ಸುಶ್ಮಿತಾ ದೇವ್

Update: 2017-11-04 20:50 IST

ಬೆಂಗಳೂರು, ನ.4: ಆರೆಸ್ಸೆಸ್ ಮತ್ತು ಬಿಜೆಪಿಗರು ನೂರು ವರ್ಷ ಹಿಂದಿದ್ದಾರೆ. ಮಹಿಳೆಯರಿಗೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ನೀಡಿ ಗೌರವ ಕೊಡುತ್ತಿದ್ದೇವೆ ಎಂದು ಕೊಂಡಿದ್ದಾರೆ. ಆದರೆ, ಆ ಮೂಲಕ ಮಹಿಳೆಯನ್ನು ಜನಪ್ರತಿನಿಧಿಯಾಗಿ ವಿಧಾನಸಭೆ, ಸಂಸತ್ತಿಗೆ ಕಳುಹಿಸುವ ಬದಲು ಅಡುಗೆ ಮನೆಗೆ ಸೀಮಿತ ಮಾಡಿದ್ದಾರೆ ಎಂದು ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸುಶ್ಮಿತಾ ದೇವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಅರಮನೆ ಮೈದಾನದಲ್ಲಿರುವ ಟೆನ್ನಿಸ್ ಪೆವಿಲಿಯನ್‌ನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಹಿಳಾ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

‘ಅಬ್ ಕೀ ಬಾರ್, ಮೋದಿ ಕೀ ಹಾರ್’ ನಿಶ್ಚಿತ. ಮೋದಿ ‘ಬೇಟಿ ಬಚಾವೋ, ಬೇಟಿ ಪಡಾವೋ’ ಎನ್ನುತ್ತಿದ್ದರೆ, ಸೋನಿಯಾಗಾಂಧಿ ‘ಬೇಟಿ ಕೋ ಸಮ್ಮಾನ್ ದೋ, ಅಧಿಕಾರ್ ದೋ’ ಎನ್ನುತ್ತಿದ್ದಾರೆ. ನಮ್ಮ ಮೇಲೆ ನೀವು ನಂಬಿಕೆ ಇಟ್ಟುಕೊಂಡಿದ್ದೀರಿ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ. ಕುರ್ಚಿಗಾಗಿ ಚಿಂತೆಮಾಡಬೇಡಿ ಎಂದು ಸಲಹೆ ನೀಡಿದರು.

ಗುಜರಾತ್ ಮಾದರಿಯಲ್ಲಿ ದೇಶದ ಅಭಿವೃದ್ಧಿ ಮಾಡುವುದಾಗಿ ಪ್ರಧಾನಿ ನರೇಂದ್ರಮೋದಿ ಹೇಳಿದ್ದರು. ಆದರೆ ಅದು ಸಾಧ್ಯವಾಗಲೇ ಇಲ್ಲ. ಈ ಬಾರಿ ಗುಜರಾತ್‌ನಲ್ಲೇ ಬಿಜೆಪಿ ನೆಲೆ ಕಳೆದುಕೊಳ್ಳಲಿದೆ. ಕರ್ನಾಟಕ ದೇಶಕ್ಕೆ ಮಾದರಿಯಾಗಲಿದೆ ಎಂದು ಹೇಳಿದರು.

ಕೇಂದ್ರ ಸರಕಾರ ಮಹಿಳೆಯರನ್ನು ಕಡೆಗಣಿಸಿದೆ. ಲೋಕಸಭೆಯಲ್ಲಿ ಎಷ್ಟು ಮಂದಿ ಮಹಿಳಾ ಸದಸ್ಯರಿದ್ದಾರೆ. ಮಹಿಳೆಯರಿಗೆ ರಾಜಕೀಯ ಸ್ಥಾನಮಾನ ನೀಡಲು ಬಿಜೆಪಿ ಹಿಂದೇಟು ಹಾಕುತ್ತಿದೆ. ದಿಲ್ಲಿ, ಗುಜರಾತ್‌ನಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿವೆ. ಈ ಬಗ್ಗೆ ಕೇಂದ್ರ ಸರಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.

ಮಹಿಳಾ ಕಾಂಗ್ರೆಸಿಗರು ಎಂದೂ ಬೃಹತ್ ಸಮಾವೇಶ ಮಾಡುವ ಅಗತ್ಯವಿಲ್ಲ. ಆದರೆ, ಚುನಾವಣೆ ದಿನ ಸಮೀಪಿಸುತ್ತಿರುವಾಗ ಮನೆ ಮನೆಗೆ ಭೇಟಿ ಕೊಡುವ ಸಾಮರ್ಥ್ಯ ಇರೋದು ಮಹಿಳಾ ಕಾಂಗ್ರೆಸಿಗರಿಗೆ ಮಾತ್ರ. ಮಹಿಳೆಯರು ಮನಸ್ಸು ಮಾಡಿದರೆ ಚುನಾವಣೆಯ ಚಿತ್ರಣ ಬದಲಾಯಿಸಬಲ್ಲರು ಎಂದರು.

ಇಡೀ ಭಾರತವನ್ನು ಗುಜರಾತ್ ಮಾದರಿಯಲ್ಲಿ ಬದಲಾವಣೆ ಮಾಡುತ್ತೇನೆ ಎಂದು ನರೇಂದ್ರ ಮೋದಿ ಹೇಳುತ್ತಿದ್ದರು. ಆದರೆ ಈಗ ಗುಜರಾತ್‌ನ ಮತದಾರರೇ ‘ವಿಕಾಸ್ ಪಾಗಲ್ ಹೋಗಯಾ’ ಎನ್ನುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಡೆದಿರುವ ಸ್ಥಾನಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಗುಜರಾತ್ ಚುನಾವಣೆಯಲ್ಲಿ ಪಡೆಯುತ್ತೇವೆ. ಇದು ಬಿಜೆಪಿಯವರಿಗೆ ನನ್ನ ಸವಾಲು. ಈ ಸವಾಲಿನಲ್ಲಿ ನಾನು ಗೆಲ್ಲದೇ ಹೋದರೆ ಮತ್ತೆ ನಾನು ಕರ್ನಾಟಕಕ್ಕೆ ಚುನಾವಣಾ ಪ್ರಚಾರಕ್ಕೆ ಕಾಲಿಡುವುದಿಲ್ಲ ಎಂದು ಹೇಳಿದರು.

ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿ ನಾಯಕರು ಪರಿವರ್ತನಾ ಯಾತ್ರೆ ಆರಂಭಿಸಿದ್ದಾರೆ. ಯಾರ ಪರಿವರ್ತನೆಗಾಗಿ ಈ ಯಾತ್ರೆ. ಅಧಿಕಾರ ಕೊಟ್ಟಾಗ ನಡೆಸಲು ಆಗಲಿಲ್ಲ. ಐದು ವರ್ಷ ಬರೀ ಒಳ ಜಗಳ ಮಾಡಿಕೊಂಡು ಇದ್ದರು. ಈಗ ಪರಿವರ್ತನೆ ಅಂತ ಹೊರಟಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ವಿಪಕ್ಷಗಳಿಂದ ಸಾಧ್ಯವಿಲ್ಲ. ಕಾಂಗ್ರೆಸ್ ಅವರನ್ನ ಸೋಲಿಸಲಿಕ್ಕೆ ಕಾಂಗ್ರೆಸ್ ಅವರಿಂದ ಮಾತ್ರ ಸಾಧ್ಯ. ನಾವು ಒಂದಾಗಿ ಹೋದರೆ ನಮ್ಮನ್ನ ಸೋಲಿಸಲಿಕ್ಕೆ ಯಾರಿಂದಲು ಸಾಧ್ಯವಿಲ್ಲ ಎಂದರು.

ವಿಧಾನಪರಿಷತ್ ಸದಸ್ಯೆ ಡಾ.ಜಯಮಾಲಾ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಕಾಂಗ್ರೆಸಿಗರೇ ಬರಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಒಂದಾಗಿ ಹೋದರೆ ನಮ್ಮನ್ನು ಸೋಲಿಸಲಿಕ್ಕೆ ಯಾರಿಂದಲು ಸಾಧ್ಯವಿಲ್ಲ. ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಅನ್ನೋರು ಮತ್ತೊಮ್ಮೆ ಹುಟ್ಟಿ ಬರಬೇಕು ಎಂದು ಸವಾಲು ಹಾಕಿದರು.

ಸಭೆಯಲ್ಲಿ ಪಕ್ಷದ ಮಹಿಳಾ ಘಟಕ ಬಲವರ್ಧನೆ, ಬೂತ್‌ಮಟ್ಟದಲ್ಲಿ ಕಾರ್ಯಕರ್ತರನ್ನು ಸಜ್ಜುಗೊಳಿಸುವುದು, ಪ್ರತಿಪಕ್ಷಗಳ ವಿರುದ್ಧ ಹೋರಾಟ ರೂಪಿಸುವುದು, ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುವುದು ಸೇರಿದಂತೆ ಇತರ ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ.

ಉಡುಗೊರೆ ಸ್ವೀಕರಿಸಲು ಪರಮೇಶ್ವರ್ ನಿರಾಕರಣೆ: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿಹೆಬ್ಬಾಳ್ಕರ್ ನೀಡಲು ಮುಂದಾದ ಉಡುಗೊರೆ ದುಬಾರಿ ಬೆಲೆಯದ್ದು ಎಂಬ ಕಾರಣದಿಂದ ಅದನ್ನು ಸ್ವೀಕರಿಸಲು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ನಿರಾಕರಿಸಿದರು. ಆನಂತರ ತುಳಸಿ ಗಿಡವನ್ನು ಅವರು ಸ್ವೀಕರಿಸಿದರು.

ನಿರ್ಣಯಗಳು: ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ತಲಾ ಒಂದು ಮಹಿಳಾ ಕಾಂಗ್ರೆಸ್ ಸಮಾವೇಶಗಳ ಆಯೋಜನೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 35ಕ್ಕಿಂತ ಹೆಚ್ಚು ಕ್ಷೇತ್ರಗಳಿಗೆ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು, ವಿಧಾನಸಭಾ ಕ್ಷೇತ್ರಗಳ ಮಟ್ಟದಲ್ಲಿ ನಡೆಯುತ್ತಿರುವ ಇಂದಿರಾ ದೀಪನಮನ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜನೆ, ಇಂದಿರಾಗಾಂಧಿ ಜನ್ಮಶತಮಾನೋತ್ಸವ ಅಂಗವಾಗಿ ನ.18ರಂದು ರಾತ್ರಿ ಗ್ರಾಮವಾಸ್ತವ್ಯ, ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಸಂದರ್ಭದಲ್ಲಿ ಕಿರುಹೊತ್ತಿಗೆಯೊಂದಿಗೆ ತುಳಸಿ ಗಿಡ ನೀಡಲು ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News