×
Ad

ಉಳುಮೆ ಚೀಟಿ ನೀಡಲು ಆಗ್ರಹಿಸಿ ನ.8 ರಂದು ಅನಿರ್ದಿಷ್ಟಾವಧಿ ಧರಣಿ: ವೆಂಕಟಾಚಲಯ್ಯ

Update: 2017-11-06 18:50 IST

ಬೆಂಗಳೂರು, ನ.6: ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ ಜಿಲ್ಲೆಗಳಲ್ಲಿನ ಬಗರ್‌ ಹುಕುಂ ಸಾಗುವಳಿದಾರರಿಗೆ ಉಳುಮೆ ಚೀಟಿ ನೀಡಬೇಕೇಂದು ಆಗ್ರಹಿಸಿ ನ.8 ರಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮನೆ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲು ಕರ್ನಾಟಕ ಪ್ರಾಂತ ರೈತ ಸಂಘ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಎನ್. ವೆಂಕಟಾಚಲಯ್ಯ, ಬೆಂಗಳೂರು ಗ್ರಾಮಾಂತರ ಹಾಗೂ ನಗರ ಮತ್ತು ರಾಮನಗರ ಜಿಲ್ಲೆಗಳಿಂದ ಸರಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ಸಾವಿರಾರು ರೈತರು ಸಕ್ರಮ ಮಾಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಸರಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಬಿಬಿಎಂಪಿಯಿಂದ 18 ಕಿ.ಮೀ.ವ್ಯಾಪ್ತಿ ಒಳಗೆ ಉಳುಮೆ ಚೀಟಿ ನೀಡದೆ ಮೀಸಲು ಮಾಡಿದ್ದಾರೆ. ಎರಡು ಎಕರೆ ಸಾಗುವಳಿ ಮಾಡುತ್ತಿರುವ ಬಡ ರೈತರನ್ನು ಅಕ್ರಮ ಭೂ ಒತ್ತುವರಿದಾರರು ಎಂದು ಗುರುತಿಸಿ ತಹಶೀಲ್ದಾರ್ ನೇತೃತ್ವದಲ್ಲಿ ವಿಶೇಷ ಕೋರ್ಟ್ ರಚನೆ ಮಾಡಿ, ರೈತರಿಗೆ ನೋಟಿಸ್ ನೀಡಿ ಕೇಸ್‌ಗಳನ್ನು ದಾಖಲಿಸಿ ಕೋರ್ಟ್ ಮೆಟ್ಟಿಲೇರಿಸುತ್ತಿದ್ದಾರೆ. ಅಲ್ಲದೆ, ಜೈಲಿಗೆ ಕಳಿಸುತ್ತೇವೆ, ದಂಡ ವಿಧಿಸುತ್ತೇವೆ ಎಂದು ಬೆದರಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜಕಾರಣಿಗಳಿಗೆ, ಭೂ ಮಾಫಿಯಾದವರಿಗೆ ಹಾಗೂ ಭೂಗಳ್ಳರಿಗೆ 18 ಕಿ.ಮೀ. ವ್ಯಾಪ್ತಿಯಲ್ಲಿ ನೂರಾರು ಎಕರೆ ಭೂಮಿಯನ್ನು ಮಂಜೂರು ಮಾಡುತ್ತಿದ್ದಾರೆ ಎಂದ ಅವರು, ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಬಿ.ಎಂ.ಕಾವಲ್ ಭೂಮಿಯಲ್ಲಿ 30-40 ಎಕರೆ ಸರಕಾರಿ ಭೂಮಿಯನ್ನು, ಅರಣ್ಯ ಇಲಾಖೆ ನಿರ್ವಹಿಸುತ್ತಿದ್ದ ಭೂಮಿಯಲ್ಲಿದ್ದ ಮರಗಳನ್ನು ಕಡಿದು, ನೈಸ್ ಕಂಪೆನಿಗೆ ಹಂಚಿದ್ದಾರೆ ಎಂದರು.

ಮುಖ್ಯಮಂತ್ರಿ, ಜಿಲ್ಲಾಧಿಕಾರಿಗಳಿಗೆ ಹಾಗೂ ಕಂದಾಯ ಸಚಿವರಿಗೆ ಬಡವರ ಭೂಮಿಯನ್ನು ಸಕ್ರಮ ಮಾಡುವಂತೆ ಅನೇಕ ಬಾರಿ ಧರಣಿ ನಡೆಸಿ ಮನವಿ ಪತ್ರ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ಭೂಗಳ್ಳರೊಂದಿಗೆ, ಕಾರ್ಪೊರೇಟ್ ಕಂಪೆನಿಗಳೊಂದಿಗೆ ಶಾಮೀಲಾಗಿ ನೂರಾರು ಎಕರೆ ಭೂಮಿಯನ್ನು ಅವರಿಗೆ ಮಂಜೂರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಮನಗರ ಜಿಲ್ಲೆಯಲ್ಲಿ ಅರಣ್ಯ ಮತ್ತು ಬಗರ್‌ಹುಕುಂ ಸಾಗುವಳಿದಾರರಿಗೆ ಉಳುಮೆ ಚೀಟಿ ನೀಡಿಲ್ಲ ಎಂದ ಅವರು, ಬೆಂಗಳೂರು ನಗರದಿಂದ 18 ಕಿ.ಮೀ., ನಗರ ಸಭೆಯಿಂದ 10 ಕಿ.ಮೀ ಹಾಗೂ ಪಂಚಾಯಿತಿ ವ್ಯಾಪ್ತಿಯಿಂದ 5 ಕಿ.ಮೀ ಒಳಗೆ ಭೂಮಿ ನೀಡಬಾರದು ಎಂಬ ಷರತ್ತನ್ನು ವಾಪಸ್ಸು ಪಡೆಯಬೇಕು. ಕೂಡಲೇ ಅರ್ಜಿ ಸಲ್ಲಿಸಿದ ಎಲ್ಲರಿಗೂ ಭೂಮಿ ಮಂಜೂರು ಮಾಡಬೇಕು ಹಾಗೂ ನಿವೇಶನ ರಹಿತರಿಗೆ ಮನೆ ಕಟ್ಟಿಕೊಡಬೇಕು ಎಂದು ಆಗ್ರಹಿಸಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News