×
Ad

ಐಟಿ ಅಧಿಕಾರಿಗಳು ಜಾರಿ ನಿರ್ದೇಶನಾಲಯ-ಸಿಬಿಐ ಅಸ್ತ್ರಗಳನ್ನು ಬಳಸಲಿ: ಡಿ.ಕೆ.ಶಿವಕುಮಾರ್

Update: 2017-11-06 20:43 IST

ಬೆಂಗಳೂರು, ನ.6: ನನ್ನ ಜೀವನ ತೆರೆದ ಪುಸ್ತಕವಿದ್ದಂತೆ, ಸಾಕಷ್ಟು ಹೋರಾಟವನ್ನು ಮಾಡಿದ್ದೇನೆ. ಆದಾಯ ತೆರಿಗೆ ಇಲಾಖೆಯವರಿಗೆ ಜಾರಿ ನಿರ್ದೇಶನಾಲಯ, ಸಿಬಿಐ ಸೇರಿದಂತೆ ಏನೆಲ್ಲಾ ಅವಕಾಶಗಳಿವೆಯೊ ಅವುಗಳನ್ನು ಬಳಸಿಕೊಳ್ಳಲಿ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸೋಮವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆಯ ಕಚೇರಿಗೆ ಕುಟುಂಬ ಸದಸ್ಯರೊಂದಿಗೆ ವಿಚಾರಣೆಗೆ ಹಾಜರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನ್ಯಾಯಬದ್ಧವಾಗಿದ್ದೇನೆ. ತಪ್ಪು ಮಾಡಿದ್ದರೆ, ಶಿಕ್ಷೆ, ತನಿಖೆ, ಕ್ರಮ ಏನು ಬೇಕಾದರೂ ಮಾಡಲಿ ಎಂದರು.

ಕುಟುಂಬ ಸದಸ್ಯರು, ಸ್ನೇಹಿತರು, ಹಿತೈಷಿಗಳು ಸೇರಿ 15 ಮಂದಿಯನ್ನು ಪ್ರತ್ಯೇಕವಾಗಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಕಾನೂನನ್ನು ಪ್ರಶ್ನೆ ಮಾಡಲು ನಾನು ಯಾರು? ನಾನು ಯಾವುದಕ್ಕೂ ಚಿಂತೆ ಮಾಡುವುದಿಲ್ಲ. ನನ್ನ ಆತ್ಮಸಾಕ್ಷಿಯಂತೆ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ನನ್ನ ಬಾಯಿ ಮುಚ್ಚಿಸಲು ಪ್ರಯತ್ನ ನಡೆಯುತ್ತಿರುವುದು ಗೊತ್ತು. ಆದರೆ, ಯಾರಿಗೂ ಜಗ್ಗಲ್ಲ, ಬಗ್ಗಲ್ಲ. ಆದಾಯ ತೆರಿಗೆ ಅಧಿಕಾರಿಗಳು ನಡೆಸುತ್ತಿರುವ ತನಿಖೆಗೆ ಸಹಕಾರ ನೀಡುತ್ತೇನೆ. ಯಾವುದೇ ಮಾಹಿತಿಯನ್ನು ಮುಚ್ಚಿಡುವ ಪ್ರಯತ್ನ ಮಾಡುವುದಿಲ್ಲ. ಅಧಿಕಾರಿಗಳು ವಿಚಾರಣೆ ವೇಳೆ ನಮ್ಮಿಂದಿಗೆ ಗೌರವದಿಂದ ನಡೆದುಕೊಂಡಿದ್ದಾರೆ ಎಂದರು.

ಮುಂದಿನ ದಿನಗಳಲ್ಲಿಯೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ವಿಚಾರಣೆಗೆ ಹಾಜರಾಗುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಇಂತಹ ಬಹಳಷ್ಟು ತನಿಖೆಗಳು, ವಿಚಾರಣೆಗಳನ್ನು ನೋಡಿದ್ದೇನೆ. ಬೇಕಾದಷ್ಟು ಹೋರಾಟಗಳನ್ನು ಮಾಡಿದ್ದೇನೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ, ಪತ್ನಿ ಉಷಾ, ಪುತ್ರಿ ಐಶ್ವರ್ಯಾ, ವಿಧಾನಪರಿಷತ್ ಸದಸ್ಯ ರವಿ, ಧವನಂ ಜ್ಯುವೆಲರ್ಸ್‌ ಮಾಲಕ ಸೇರಿದಂತೆ 15 ಮಂದಿ ಪ್ರತ್ಯೇಕವಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಸುಮಾರು ಎರಡು ಗಂಟೆ ಹದಿನೈದು ನಿಮಿಷಗಳ ಕಾಲ ಇವರ ವಿಚಾರಣೆಯನ್ನು ನಡೆಸಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News