ಲಿಂಗಪರಿವರ್ತಿತ ವ್ಯಕ್ತಿಗೆ ಉದ್ಯೋಗ ನಿರಾಕರಣೆ: ಏರ್‌ಇಂಡಿಯಾಗೆ ನೋಟಿಸ್

Update: 2017-11-07 03:53 GMT

ಹೊಸದಿಲ್ಲಿ, ನ. 7: ಲಿಂಗಪರಿವರ್ತಿತ ಅಭ್ಯರ್ಥಿಯೊಬ್ಬರಿಗೆ ವಿಮಾನದ ಕ್ಯಾಬಿನ್ ಸಿಬ್ಬಂದಿ ಕೆಲಸವನ್ನು ನಿರಾಕರಿಸಿದ್ದಕ್ಕಾಗಿ ವಿಮಾನಯಾನ ಸಚಿವಾಲಯ ಮತ್ತು ಏರ್ ಇಂಡಿಯಾಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ.

2014ರಲ್ಲಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿ, ಲಿಂಗ ಪರಿವರ್ತಿತ ವ್ಯಕ್ತಿಗಳನ್ನು ತೃತೀಯ ಲಿಂಗಿಗಳು ಎಂದು ಪರಿಗಣಿಸುವಂತೆ ಆದೇಶಿಸಿತ್ತು. ಆದರೆ ಬಹಳಷ್ಟು ವಲಯಗಳಲ್ಲಿ ಈ ಸಮುದಾಯವನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳುತ್ತಿಲ್ಲ.

ಏರ್ ಇಂಡಿಯಾ ಉದ್ಯೋಗಕ್ಕೆ ಅರ್ಜಿ ಹಾಕುವ ಮುನ್ನ ಎಂಜಿನಿಯರಿಂಗ್ ಪದವೀಧರ ಶಣವಿ ಪೊನ್ನುಸಾಮಿ ಸುತರ್‌ಲೆಂಡ್ ಮತ್ತು ಏರ್‌ಇಂಡಿಯಾದ ಗ್ರಾಹಕ ಬೆಂಬಲ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದ. ಬಳಿಕ ಮಹಿಳೆಯಾಗಿ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದ. ಸ್ತ್ರೀ ಆಗಿ ಪರಿವರ್ತನೆಯಾದ ಪೊನ್ನುಸಾಮಿಗೆ ಉದ್ಯೋಗ ನಿರಾಕರಿಸಿದ ಏರ್ ಇಂಡಿಯಾ, ಯಾವುದೇ ವರ್ಗದಲ್ಲಿ ಈಕೆಯನ್ನು ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಕ್ಯಾಬಿನ್ ಸಿಬ್ಬಂದಿ ಹುದ್ದೆ ಕೇವಲ ಮಹಿಳಾ ಅರ್ಜಿದಾರರಿಗೆ ಮಾತ್ರ ಮೀಸಲು ಎಂದು ಹೇಳಿತ್ತು.

ಈ ಬಗ್ಗೆ ಪೊನ್ನುಸಾಮಿ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದರು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ್ದರು. ಅರ್ಜಿದಾರರ ಪರ ವಕೀಲ ಪ್ರವೀಣ್ ಸ್ವರೂಪ್ ಅವರು, ತಮ್ಮ ಕಕ್ಷಿದಾರರು ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದರೂ, ಲಿಂಗ ಪರಿವರ್ತಿತ ವ್ಯಕ್ತಿಗಳನ್ನು ಈ ವರ್ಗದಲ್ಲಿ ಸೇರಿಸಿ ಕೊಳ್ಳುವಂತಿಲ್ಲ ಎಂದು ಉದ್ಯೋಗ ನಿರಾಕರಿಸಿದೆ ಎಂದು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News