ನ.8ರಂದು ನೋಟು ಅಮಾನ್ಯೀಕರಣ ವಿರೋಧಿಸಿ ಕೆಪಿಸಿಸಿಯಿಂದ ಕರಾಳ ದಿನಾಚರಣೆ: ದಿನೇಶ್ ಗುಂಡೂರಾವ್
ಬೆಂಗಳೂರು, ನ.7: ಪ್ರಧಾನಿ ನರೇಂದ್ರಮೋದಿ ಬಹುಮುಖ ಬೆಲೆಯ ನೋಟುಗಳ ಅಮಾನ್ಯೀಕರಣ ಮಾಡಿ ನ.8ಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿರುವುದರಿಂದ ಕೆಪಿಸಿಸಿ ವತಿಯಿಂದ ಕರಾಳ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ.8ರಂದು ಬೆಳಗ್ಗೆ 11 ಗಂಟೆಗೆ ಮೌರ್ಯ ವೃತ್ತದಿಂದ ಸ್ವಾತಂತ್ರ ಉದ್ಯಾನವನದವೆಗೆ ರ್ಯಾಲಿ ನಡೆಸುತ್ತೇವೆ ಎಂದರು.
ನೋಟುಗಳ ಅಮಾನ್ಯದಿಂದ ಉಂಟಾದ ಪರಿಸ್ಥಿತಿಯಿಂದ ದೇಶಾದ್ಯಂತ ಪ್ರಾಣ ಕಳೆದುಕೊಂಡ 150ಕ್ಕೂ ಹೆಚ್ಚು ಜನರಿಗೆ ಬ್ರಿಗೇಡ್ ರಸ್ತೆಯಲ್ಲಿರುವ ವಾರ್ ಮೆಮೋರಿಯಲ್ ಬಳಿ ಸಂಜೆ ನಮನ ಸಲ್ಲಿಸಲಿದ್ದೇವೆ ಎಂದು ಹೇಳಿದರು.
ನೋಟುಗಳ ಅಮಾನ್ಯೀಕರಣವಾಗಿ ಒಂದು ವರ್ಷ ಕಳೆದಿದೆ. ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಏಕಾಏಕಿ ನೋಟುಗಳ ಅಮಾನ್ಯೀಕರಣದ ತೀರ್ಮಾನ ಕೈಗೊಂಡರು. ಇದರಿಂದ, ಸಾಮಾನ್ಯ ಜನರು, ರೈತರು, ಎಲ್ಲರೂ ನಷ್ಟಕ್ಕೆ ಒಳಗಾದರು. ಆ ನಷ್ಟವನ್ನು ಭರಿಸುವ ಶಕ್ತಿ ಮೋದಿಗೆ ಇದೆಯೇ ಎಂದು ಪ್ರಶ್ನಿಸಿದರು.
ಮೋದಿ ಹೇಳಿದ್ದು ಯಾವುದೂ ಆಗಿಲ್ಲ, ಬರೀ ಸುಳ್ಳು ಹೇಳಿದ್ದಾರೆ. ನಾಳೆ ಇಂಡಿಯಾ ಸಫರಿಂಗ್(ಕರಾಳ ದಿನಾಚರಣೆ) ಆಚರಿಸಲಿದ್ದೇವೆ. ಬಿಜೆಪಿಯು ನ.8ರಂದು ನೋಟು ಅಮಾನ್ಯೀಕರಣದ ನಿರ್ಧಾರವನ್ನು ಸಂಭ್ರಮಿಸಲು ಮುಂದಾಗಿರುವುದನ್ನು ದಿನೇಶ್‌ಗುಂಡೂರಾವ್ ಟೀಕಿಸಿದರು.
ನೋಟುಗಳ ಅಮಾನ್ಯೀಕರಣಕ್ಕೆ ಸಂಬಂಧಿಸಿದಂತೆ ನರೇಂದ್ರಮೋದಿ ಕೈಗೊಂಡ ನಿರ್ಧಾರವು ಮೂರ್ಖತನದ ಪರಮಾವಧಿ ಎಂದು ಇಡೀ ವಿಶ್ವವೇ ಹೇಳುತ್ತಿದೆ. ದೇಶದ ಇತಿಹಾಸದಲ್ಲಿ ಇದು ಕೆಟ್ಟ ಆರ್ಥಿಕ ತೀರ್ಮಾನವಾಗಿದೆ ಎಂದು ಎಂದರು.
ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಮಾತನಾಡಿ, ದೇಶದ ಆರ್ಥಿಕ ಇತಿಹಾಸದಲ್ಲಿ ಕರಾಳ ಅಂದರೆ 2016ರ ನವೆಂಬರ್ 8. ಪ್ರಧಾನಿ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾನೂನಿಗೆ ವಿರುದ್ಧವಾಗಿ ಸರ್ವಾಧಿಕಾರಿ ರೀತಿಯಲ್ಲಿ ನೋಟ್‌ಗಳನ್ನು ಅಮಾನ್ಯ ಮಾಡಿದ್ದಾರೆ ಎಂದು ಆರೋಪಿಸಿದರು.
ದೇಶದ ಆರ್ಥಿಕತೆ ಮೇಲೆ ಮೋದಿ ಚಪ್ಪಡಿ ಎಳೆದಿದ್ದಾರೆ. ಮೋದಿ ನಿರ್ಧಾರದಿಂದ ನಮ್ಮ ಜಿಡಿಪಿ ಕುಸಿತವಾಗಿದೆ. ನೋಟುಗಳ ರದ್ದತಿಯಿಂದ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಬಡತನ ಹೆಚ್ಚಾಗುತ್ತಿದೆ. ಬೆಲೆ ಏರಿಕೆ ಆಗಿದೆ. ಇದರ ನೇರ ಹೊಣೆಯನ್ನು ಬಿಜೆಪಿ ಹೊರಬೇಕಾಗುತ್ತದೆ ಎಂದು ಆಗ್ರಹಿಸಿದರು.
ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಎಂ.ನಾರಾಯಣಸ್ವಾಮಿ, ಭೈರತಿ ಸುರೇಶ್, ರಿಝ್ವಾನ್ ಅರ್ಶದ್, ಪಿ.ಆರ್.ರಮೇಶ್, ಮೇಯರ್ ಸಂಪತ್‌ರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.