ಇಂಡಿಗೊ ಸಿಬ್ಬಂದಿಯಿಂದ ಪ್ರಯಾಣಿಕನ ಮೇಲೆ ಹಲ್ಲೆ

Update: 2017-11-08 13:36 GMT

ಹೊಸದಿಲ್ಲಿ, ನ.8: ದಿಲ್ಲಿ ವಿಮಾನನಿಲ್ದಾಣದಲ್ಲಿ ಇಂಡಿಗೋ ಏರ್‌ಲೈನ್ಸ್‌ನ ಸಿಬ್ಬಂದಿಯೋರ್ವ ಪ್ರಯಾಣಿಕನ ಜೊತೆ ಅಸಭ್ಯವಾಗಿ ವರ್ತಿಸಿದಲ್ಲದೆ ಆತನ ಮೇಲೆ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ದೃಶ್ಯಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆಯೇ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿರುವ ಸರಕಾರ, ಇಂಡಿಗೋ ಸಂಸ್ಥೆಯಿಂದ ವರದಿ ಕೇಳಿದೆ.

  ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಇಂಡಿಗೋ ಏರ್‌ಲೈನ್ಸ್ ಅಧ್ಯಕ್ಷ ಆದಿತ್ಯ ಘೋಷ್, ಪ್ರಯಾಣಿಕರಿಗೆ ಕರೆ ಮಾಡಿ ವೈಯಕ್ತಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಈ ಪ್ರಕರಣ ನಮ್ಮ ಸಂಸ್ಕೃತಿಗೆ ಹೇಳಿಮಾಡಿಸಿದ್ದಲ್ಲ ಎಂದವರು ತಿಳಿಸಿದ್ದು, ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸಿಬ್ಬಂದಿಯನ್ನು ವಜಾಗೊಳಿಸಿರುವುದಾಗಿ ತಿಳಿಸಿದ್ದಾರೆ.

     ಕಳೆದ ಅಕ್ಟೋಬರ್ 15ರಂದು ಚೆನ್ನೈಯಿಂದ ದಿಲ್ಲಿಗೆ ಇಂಡಿಗೋ ವಿಮಾನದಲ್ಲಿ ಆಗಮಿಸಿದ್ದ ತಾನು ಬಸ್ಸು ವ್ಯವಸ್ಥೆ ಮಾಡುವಂತೆ ಏರ್‌ಲೈನ್ಸ್‌ನ ಸಿಬ್ಬಂದಿಗೆ ಹೇಳಿದಾಗ ಅವರು ಅಸಭ್ಯ ರೀತಿಯಲ್ಲಿ ವರ್ತಸಿ ಒರಟು ಭಾಷೆಯಲ್ಲಿ ನಿಂದಿಸಿದರು ಎಂದು ರಾಜೀವ್ ಕಟಿಯಾಲ್ ಎಂಬವರು ದೂರಿದ್ದಾರೆ. ಬಸ್ಸು ಬಂದಾಗ ಅದನ್ನು ಹತ್ತಲು ಮುಂದಾದ ತನ್ನನ್ನು ಹಿಂದಕ್ಕೆ ಎಳೆದು ಬಸ್ಸಿನೊಳಗೆ ಹತ್ತಲು ಅವಕಾಶ ನೀಡಲಿಲ್ಲ ಎಂದು ಕಟಿಯಾಲ್ ಟಿವಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

 ಪ್ರಕರಣ ನಡೆದು ಸುಮಾರು ಒಂದು ತಿಂಗಳ ಬಳಿಕ ಪ್ರಕರಣದ ವೀಡಿಯೊ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಟಿಯಾಲ್ ಜೊತೆ ಇಂಡಿಗೋ ವಿಮಾನದ ಸಿಬ್ಬಂದಿ ವಾಗ್ವಾದದಲ್ಲಿ ತೊಡಗಿರುವುದು ವೀಡಿಯೊ ದೃಶ್ಯದಲ್ಲಿ ಕಂಡು ಬಂದಿದೆ. ಬಸ್ಸು ಬಂದಾಗ ಅದನ್ನು ಹತ್ತಲು ಮುಂದಾದ ಕಟಿಯಾಲ್‌ರನ್ನು ಆ ಸಿಬ್ಬಂದಿ ಒರಟಾಗಿ ಹಿಂದಕ್ಕೆ ಎಳೆದಾಗ ಕಟಿಯಾಲ್ ರಸ್ತೆಯ ಮೇಲೆ ಬಿದ್ದಿದ್ದಾರೆ. ಮೇಲಕ್ಕೇಳಲು ಯತ್ನಿಸಿದ ಕಟಿಯಾಲ್‌ರನ್ನು ಇಬ್ಬರು ಸಿಬ್ಬಂದಿಗಳು ನೆಲಕ್ಕೆ ಒತ್ತಿ ಹಿಡಿದು ಅವರ ಮೇಲೆ ಹಲ್ಲೆ ನಡೆಸುವ ದೃಶ್ಯವೂ ಸೆರೆಯಾಗಿದೆ. ಓರ್ವ ಸಿಬ್ಬಂದಿಯಂತೂ ಕಟಿಯಾಲ್‌ರ ಕುತ್ತಿಗೆ ಒತ್ತಿ ಹಿಡಿದಾಗ ಅವರು ತನ್ನ ಕೈಗಳನ್ನು ನೋವಿನಿಂದ ಅಲ್ಲಾಡಿಸುವ ದೃಶ್ಯವೂ ವೀಡಿಯೊ ದಲ್ಲಿದೆ.

  ದೇಶದ ಅತ್ಯಂತ ಮಿತವ್ಯಯಿ ವಿಮಾನಯಾನ ಸಂಸ್ಥೆ ಎಂಬ ಹಿರಿಮೆಯ ಇಂಡಿಗೋ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇತ್ತೀಚೆಗೆ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧೂ ಕೂಡಾ ಇಂಡಿಗೋ ವಿಮಾನದ ಸಿಬ್ಬಂದಿಯ ವರ್ತನೆ ಕುರಿತು ಅಸಮಾಧಾನ ಸೂಚಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News