ಶಾಲಾ ಸಮವಸ್ತ್ರ ಕೈಮಗ್ಗ ನಿಗಮದ ಜತೆ ಶಿಕ್ಷಣ ಇಲಾಖೆ ಒಪ್ಪಂದ: ಉಮಾಶ್ರೀ
ಬೆಂಗಳೂರು, ನ. 8: ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವು ಕೈಮಗ್ಗ ನೇಕಾರರ ಆರ್ಥಿಕ ಸ್ಥಿತಿ ಸುಧಾರಣೆ ಮತ್ತು ನಿರಂತರ ಕೆಲಸ ನೀಡುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಜತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಉತ್ತಮ ಹೆಜ್ಜೆ ಇಟ್ಟಿದೆ. ಇದರಿಂದ ನೇಕಾರರ ಪರವಾಗಿ ನಿರಂತರವಾಗಿ ನಡೆಸಿದ ಪ್ರಯತ್ನಕ್ಕೆ ಫಲ ಸಿಕ್ಕಂತಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ ಸಮವಸ್ತ್ರ ಒದಗಿಸುವ ಕಾರ್ಯವನ್ನು ವಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆರ್ಥಿಕ ಇಲಾಖೆಯ ಜೊತೆ ನಿರಂತರವಾಗಿ ಚರ್ಚಿಸಿ ಅಗತ್ಯ ಆದೇಶ ಹೊರಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಅವರು ಹೇಳಿದ್ದಾರೆ.
ನ.2ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಜತೆ ಮೂರು ವರ್ಷಗಳ ಅವಧಿಗೆ ಸಮವಸ್ತ್ರ ಪೂರೈಸುವ ಒಪ್ಪಂದಕ್ಕೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವು ಸಹಿ ಮಾಡಿದೆ. ಇದರಿಂದ 2018-19ರಿಂದ 2021ರ ವರೆಗೆ ಮೂರು ವರ್ಷ ಪ್ರತಿ ವರ್ಷ 50 ಲಕ್ಷ ಮೀಟರ್ ಬಟ್ಟೆಯನ್ನು ವಿದ್ಯಾ ವಿಕಾಸ ಯೋಜನೆಯಡಿ ಶಿಕ್ಷಣ ಇಲಾಖೆ ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪೂರೈಸಲು ಒದಗಿಸಬೇಕಾಗಿದೆ. ಆ ಮೂಲಕ ನೇಕಾರರ ಕೈತುಂಬ ಕೆಲಸ ಪಡೆಯುತ್ತಾರೆ ಮತ್ತು ಅವರ ಆರ್ಥಿಕತೆ ಸುಧಾರಿಸುತ್ತದೆ. ಈ ಒಪ್ಪಂದ ಕಾರ್ಯರೂಪಕ್ಕೆ ಬರಲು ಕಾರಣರಾದ ಸಿಎಂ ಸಿದ್ದರಾಮಯ್ಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಸಚಿವೆ ಉಮಾಶ್ರೀ ಪ್ರಕಟನೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.