ಅಗ್ರ ಸ್ಥಾನ ಕಾಯ್ದುಕೊಂಡ ಕೊಹ್ಲಿ, ಜಸ್‌ಪ್ರೀತ್ ಬುಮ್ರಾ

Update: 2017-11-08 18:02 GMT

ಹೊಸದಿಲ್ಲಿ, ನ.8: ಭಾರತದ ನಾಯಕ ವಿರಾಟ್ ಕೊಹ್ಲಿ ಹಾಗೂ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಐಸಿಸಿ ಟ್ವೆಂಟಿ-20 ರ‍್ಯಾಂಕಿಂಗ್‌ನಲ್ಲಿ ಕ್ರಮವಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.

ನ್ಯೂಝಿಲೆಂಡ್ ವಿರುದ್ಧ ತಿರುವನಂತಪುರದಲ್ಲಿ ಮಂಗಳವಾರ ನಡೆದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಕೊಹ್ಲಿ ಒಟ್ಟು 103 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಕಿವೀಸ್ ವಿರುದ್ಧ ಸರಣಿಯಲ್ಲಿ ಬುಮ್ರಾ ಭಾರತದ ಪರ ಗರಿಷ್ಠ ವಿಕೆಟ್ ಕಬಳಿಸಿದ್ದರು. ಒಟ್ಟು 824 ರೇಟಿಂಗ್ ಪಾಯಿಂಟ್ ಪಡೆದಿರುವ ಕೊಹ್ಲಿ ಎರಡನೆ ಸ್ಥಾನದಲ್ಲಿರುವ ಆ್ಯರೊನ್ ಫಿಂಚ್‌ಗಿಂತ 40 ಅಂಕ ಮುಂದಿದ್ದಾರೆ. ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ 724 ಅಂಕ ಗಳಿಸಿರುವ ಬುಮ್ರಾ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. 719 ಅಂಕ ಗಳಿಸಿರುವ ಇಮಾದ್ ವಾಸಿಂ ಎರಡನೆ ಸ್ಥಾನದಲ್ಲಿದ್ದಾರೆ.

ಟೀಮ್ ರ‍್ಯಾಂಕಿಂಗ್‌ನಲ್ಲಿ ನ್ಯೂಝಿಲೆಂಡ್ 2ನೆ ಸ್ಥಾನಕ್ಕೆ ಕುಸಿದರೆ, ಭಾರತ ಐದನೆ ಸ್ಥಾನದಲ್ಲಿದೆ. ಭಾರತ ವಿರುದ್ಧ ಟ್ವೆಂಟಿ-20 ಸರಣಿಗೆ ಮೊದಲು ಕಿವೀಸ್ ನಂ.1 ಸ್ಥಾನದಲ್ಲಿತ್ತು. ಆದರೆ, ಮೊದಲ ಟ್ವೆಂಟಿ-20 ಪಂದ್ಯವನ್ನು ಸೋತ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಮೊದಲ ಸ್ಥಾನ ಬಿಟ್ಟುಕೊಟ್ಟಿತ್ತು. ಮತ್ತೊಂದೆಡೆ, ಭಾರತ ಐದನೆ ಸ್ಥಾನದಲ್ಲಿ ಮುಂದುವರಿದಿದೆ.

ನ್ಯೂಝಿಲೆಂಡ್ ತಂಡದಲ್ಲಿ ಐಶ್ ಸೋಧಿ ಹಾಗೂ ಟ್ರೆಂಟ್ ಬೌಲ್ಟ್ ರ‍್ಯಾಂಕಿಂಗ್‌ನಲ್ಲಿ ಏರಿಕೆ ಕಂಡಿದ್ದಾರೆ. ಸೋಧಿ 5 ಸ್ಥಾನ ಭಡ್ತಿ ಪಡೆದು ವೃತ್ತಿಜೀವನದಲ್ಲಿ ಮೊದಲ ಬಾರಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ. ಟ್ವೆಂಟಿ-20 ಸರಣಿಯುದ್ದಕ್ಕೂ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಾಡಿರುವ ಬೌಲ್ಟ್ 14 ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ 16ನೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News