ಗುಜರಾತಿನ ಪಾಟಿದಾರ್ ಗ್ರಾಮಗಳಲ್ಲಿ ರಾಹುಲ್ ಗಾಂಧಿಗೆ ಭಾರೀ ಸ್ವಾಗತ

Update: 2017-11-11 14:36 GMT

ಅಹ್ಮದಾಬಾದ್,ನ.11: ವಿಧಾನಸಭಾ ಚುನಾವಣಾ ಕಾವಿನಲ್ಲಿರುವ ಗುಜರಾತ್‌ಗೆ ನಾಲ್ಕನೇ ಬಾರಿ ಶನಿವಾರ ಬಂದಿಳಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಪಾಟಿದಾರ್ ಗ್ರಾಮಗಳಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ.

ಅಕ್ಷರ ಧಾಮ ದೇವಸ್ಥಾನದಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸುವುದರೊಂದಿಗೆ ತನ್ನ ಉತ್ತರ ಗುಜರಾತ್ ಪ್ರವಾಸವನ್ನು ಆರಂಭಿಸಿದ ರಾಹುಲ್ ಪ್ರದೇಶದಲ್ಲಿಯ ಪಾಟಿದಾರ ಬಾಹುಳ್ಯದ ಗ್ರಾಮಗಳಿಗೆ ಭೇಟಿ ನೀಡಿದರು. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರು ‘ಜೈ ಸರ್ದಾರ್’ ಘೋಷಣೆಗಳೊಂದಿಗೆ ಅವರನ್ನು ಸ್ವಾಗತಿಸಿದರು. ತನ್ನ ಭೇಟಿಯ ಸಂದರ್ಭ ರಾಹುಲ್ ಪಾಟಿದಾರ್ ಟೋಪಿಯನ್ನು ಧರಿಸಿದ್ದರು.

ಮಾಜ್ರಾ, ಚಿಲೋದಾ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಿದ ರಾಹುಲ್ ಮಾರ್ಗಮಧ್ಯೆ ರಸ್ತೆಬದಿಯ ಡಾಬಾವೊಂದರಲ್ಲಿ ಫಾಫ್ಡಾ ಮತ್ತು ಗೋಟಾಗಳಂತಹ ಸಾಂಪ್ರದಾಯಿಕ ಗುಜರಾತಿ ಖಾದ್ಯಗಳನ್ನು ಸವಿದರು. ರಾಹುಲ್‌ರನ್ನು ನೋಡಲು ಜನರು ಭಾರೀ ಸಂಖ್ಯೆಯಲ್ಲಿ ಸೇರಿದ್ದರು. ತನ್ನ ಪ್ರಚಾರ ಭಾಷಣದಲ್ಲಿ ಅವರು ಚುನಾವಣೆಯಲ್ಲಿ ಮಹಿಳೆಯರ ಪಾತ್ರದ ಕುರಿತೂ ಮಾತನಾಡಿದರು.

ಎರಡು ದಿನಗಳ ಹಿಂದಷ್ಟೇ ಎಬಿಪಿ-ಸಿಎಸ್‌ಡಿಎಸ್ ಜನಾಭಿಪ್ರಾಯ ಸಂಗ್ರಹವು ಗುಜರಾತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಭಾರೀ ಗಳಿಕೆಯ ಭವಿಷ್ಯ ನುಡಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News