ಗೌತಮ್ ಗಂಭೀರ್ ಶತಕ: ದಿಲ್ಲಿ 277/4

Update: 2017-11-11 18:26 GMT

ಆಲೂರು(ಕರ್ನಾಟಕ), ನ.11: ಕರ್ನಾಟಕ ವಿರುದ್ಧದ ರಣಜಿ ಟ್ರೋಫಿಯ ‘ಎ’ ಗುಂಪಿನ ಪಂದ್ಯದಲ್ಲಿ ಮೂರನೆ ದಿನವಾದ ಶನಿವಾರ 41ನೆ ಪ್ರಥಮ ದರ್ಜೆ ಕ್ರಿಕೆಟ್ ಶತಕ ಬಾರಿಸಿರುವ ಆರಂಭಿಕ ಆಟಗಾರ ಗೌತಮ್ ಗಂಭೀರ್ ದಿಲ್ಲಿ ತಂಡ 4 ವಿಕೆಟ್‌ಗಳ ನಷ್ಟಕ್ಕೆ 277 ರನ್ ಗಳಿಸಲು ನೆರವಾಗಿದ್ದಾರೆ.

 ಇಲ್ಲಿನ ಕೆಎಸ್‌ಸಿಎ ಸ್ಟೇಡಿಯಂನಲ್ಲಿ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 649 ರನ್ ಗಳಿಸಿತು. ಇದಕ್ಕೆ ಉತ್ತರಿಸಹೊರಟಿರುವ ದಿಲ್ಲಿ ಪರ ಗಂಭೀರ್ ಹಾಗೂ ಉನ್ಮುಕ್ತ್ ಚಂದ್ ಇನಿಂಗ್ಸ್ ಆರಂಭಿಸಿದರು. ಚಂದ್ ಕೇವಲ 16 ರನ್ ಗಳಿಸಿ ಸ್ಟುವರ್ಟ್ ಬಿನ್ನಿಗೆ ವಿಕೆಟ್ ಒಪ್ಪಿಸಿದರು.

ಆಗ 25ರ ಹರೆಯದ ಧುೃವ್ ಶೋರೆ 64 ರನ್(97ಎಸೆತ, 8 ಬೌಂಡರಿ)ಅವರೊಂದಿಗೆ ಕೈಜೋಡಿಸಿದ ಗಂಭೀರ್ ಎರಡನೆ ವಿಕೆಟ್‌ಗೆ 110 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಈ ಜೋಡಿಯನ್ನು ಅಭಿಮನ್ಯು ಮಿಥುನ್ ಬೇರ್ಪಡಿಸಿದರು. ಶೋರೆ ಔಟಾದ ಬಳಿಕ ತಮ್ಮದೇ ರಾಜ್ಯದ ರಿಷಬ್ ಪಂತ್ ಅವರೊಂದಿಗೆ ಸೇರಿಕೊಂಡ ಗಂಭೀರ್ 4ನೆ ವಿಕೆಟ್‌ಗೆ 88 ರನ್ ಜೊತೆಯಾಟ ನಡೆಸಿ ಇನಿಂಗ್ಸ್ ಬೆಳೆಸಿದರು.

ಪಂತ್ 41 ರನ್(59 ಎಸೆತ, 3 ಬೌಂಡರಿ, 2ಸಿಕ್ಸರ್) ಗಳಿಸಿ ಕೃಷ್ಣಪ್ಪ ಗೌತಮ್‌ಗೆ ವಿಕೆಟ್ ಒಪ್ಪಿಸಿದರು. ಈ ನಡುವೆ ಗಂಭೀರ್ ಪ್ರಸ್ತುತ ಪಂದ್ಯದಲ್ಲಿ ಕರ್ನಾಟಕದ ಮಾಯಾಂಕ್ ಅಗರವಾಲ್ ಹಾಗೂ ಸ್ಟುವರ್ಟ್ ಬಿನ್ನಿ ಬಳಿಕ ಶತಕ ಗಳಿಸಿದ ಮೂರನೆ ಆಟಗಾರ ಎನಿಸಿಕೊಂಡರು. ಗಂಭೀರ್ ಅಜೇಯ 135(237 ಎಸೆತ, 20 ಬೌಂಡರಿ) ಹಾಗೂ ಮಿಲಿಂದ್ ಕುಮಾರ್(ಅಜೇಯ 10)5ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 28 ರನ್ ಸೇರಿಸಿದ್ದಾರೆ. ಕರ್ನಾಟಕದ ಪರ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ(2-39)ಎರಡು ವಿಕೆಟ್ ಪಡೆದಿದ್ದಾರೆ.

ಗಂಭೀರ್‌ಗೆ ಟೀಮ್ ಇಂಡಿಯಾಕ್ಕೆ ವಾಪಸಾಗುವ ಅವಕಾಶ ಕ್ಷೀಣಿಸಿದೆ. ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಕೆಎಲ್ ರಾಹುಲ್, ಶಿಖರ್ ಧವನ್, ರೋಹಿತ್ ಶರ್ಮ ಹಾಗೂ ಅಜಿಂಕ್ಯ ರಹಾನೆ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಮುರಳಿ ವಿಜಯ್ ಭಾರತದ ಪ್ರಮುಖ ಅಗ್ರ ಸರದಿಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ವಿಜಯ್ ಶ್ರೀಲಂಕಾ ವಿರುದ್ಧ ಸರಣಿಗೆ ಅವಕಾಶ ಪಡೆದಿದ್ದಾರೆ.

ಗಂಭೀರ್ 2013ರಲ್ಲಿ ಭಾರತದ ಪರ ಕೊನೆಯ ಬಾರಿ ಏಕದಿನ ಪಂದ್ಯ ಆಡಿದ್ದರು. 2016ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಪರ ಆಡಿದ್ದರು. ರಾಹುಲ್ ಹಾಗೂ ಧವನ್ ಗಾಯಗೊಂಡಿದ್ದ ಕಾರಣ ತಂಡಕ್ಕೆ ವಾಪಸಾಗಿದ್ದ ಗಂಭೀರ್ ಎರಡು ಇನಿಂಗ್ಸ್‌ನಲ್ಲಿ 29 ಹಾಗೂ ಸೊನ್ನೆ ಸುತ್ತಿದ್ದರು.

ಸಂಕ್ಷಿಪ್ತ ಸ್ಕೋರ್

ಕರ್ನಾಟಕ: 172.2 ಓವರ್‌ಗಳಲ್ಲಿ 649/10

ದಿಲ್ಲಿ: 84 ಓವರ್‌ಗಳಲ್ಲಿ 277/4

(ಗೌತಮ್ ಗಂಭೀರ್ ಅಜೇಯ 135,ಧುೃವ್ ಶೋರೆ 64, ರಿಷಬ್ ಪಂತ್ 41,ಸ್ಟುವರ್ಟ್ ಬಿನ್ನಿ 2-39)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News