ಸ್ವಪ್ನಿಲ್ ಚೊಚ್ಚಲ ಶತಕ: ಮುಂಬೈ ಮೇಲೆ ಬರೋಡಾ ಸವಾರಿ

Update: 2017-11-11 18:28 GMT

ಮುಂಬೈ, ನ.11: ಸ್ವಪ್ನಿಲ್ ಸಿಂಗ್ ಚೊಚ್ಚಲ ಶತಕದ(164) ನೆರವಿನಿಂದ ಬರೋಡಾ ತಂಡ ಆತಿಥೇಯ ಮುಂಬೈ ವಿರುದ್ಧ ಮೇಲುಗೈ ಸಾಧಿಸಿದೆ.

ರಣಜಿ ಟ್ರೋಫಿ ‘ಸಿ’ ಗುಂಪಿನ ಪಂದ್ಯದಲ್ಲಿ ಮೂರನೆ ದಿನದಾಟದಂತ್ಯಕ್ಕೆ ಬರೋಡಾ ತಂಡ ಮೊದಲ ಇನಿಂಗ್ಸ್‌ನಲ್ಲಿ 404 ರನ್ ಮುನ್ನಡೆ ಕಾಯ್ದುಕೊಂಡಿದೆ.

500ನೆ ರಣಜಿ ಪಂದ್ಯವನ್ನಾಡುತ್ತಿರುವ ಹಾಲಿ ಚಾಂಪಿಯನ್ ಮುಂಬೈ 2ನೆ ಇನಿಂಗ್ಸ್‌ನಲ್ಲಿ 102 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿದ್ದು, ಫಾಲೋ-ಆನ್ ಭೀತಿಯಿಂದ ಪಾರಾಗಲು ಇನ್ನೂ 302 ರನ್ ಗಳಿಸಬೇಕಾಗಿದೆ.

ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಬರೋಡಾ ತಂಡ 4 ವಿಕೆಟ್ ನಷ್ಟಕ್ಕೆ 376 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿತು. ಸ್ವಪ್ನಿಲ್ 63 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದರು. 7 ಗಂಟೆಗಳ ಕಾಲ ಕ್ರೀಸ್ ಆಕ್ರಮಿಸಿಕೊಂಡಿದ್ದ ಅವರು ಮುಂಬೈ ಬೌಲರ್‌ಗಳನ್ನು ಚೆನ್ನಾಗಿ ದಂಡಿದರು. 11 ವರ್ಷಗಳ ಹಿಂದೆ ಪ್ರಥಮ ದರ್ಜೆ ಕ್ರಿಕೆಟಿಗೆ ಕಾಲಿಟ್ಟಿರುವ ಉತ್ತರಪ್ರದೇಶದ ಆಟಗಾರ ಸ್ವಪ್ನಿಲ್ ಕೊನೆಗೂ ಶತಕದ ಕನಸು ಈಡೇರಿಸಿಕೊಂಡರು.

ಮುಂಬೈನ ಮೊದಲ ಇನಿಂಗ್ಸ್ 171 ರನ್‌ಗೆ ಉತ್ತರವಾಗಿ 9 ವಿಕೆಟ್ ನಷ್ಟಕ್ಕೆ 575 ರನ್ ಗಳಿಸಿದ ಬರೋಡಾ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

2ನೆ ಇನಿಂಗ್ಸ್ ಆರಂಭಿಸಿದ ಮುಂಬೈನ ಪರ 17ರ ಹರೆಯದ ಆರಂಭಿಕ ಆಟಗಾರ ಪೃಥ್ವಿ ಶಾ 56 ರನ್ ಗಳಿಸಿ ಮಿಂಚಿದರು. ಎಡಗೈ ಸ್ಪಿನ್ನರ್ ಆಗಿರುವ ಸ್ವಪ್ನಿಲ್ ಅವರು ಶಾರನ್ನು ಕ್ಲೀನ್‌ಬೌಲ್ಡ್ ಮಾಡಿದರು.

  ನಾಯಕ ಆದಿತ್ಯ ತಾರೆ(5), ಶ್ರೇಯಸ್ ಅಯ್ಯರ್(8) ಹಾಗೂ ವಿಜಯ್ ಗೊಹಿಲ್(0) ಅಲ್ಪ ಮೊತ್ತಕ್ಕೆ ಔಟಾಗಿದ್ದಾರೆ. ಅಜಿಂಕ್ಯ ರಹಾನೆ(28) ಹಾಗೂ ಸೂರ್ಯಕಾಂತ್ ಯಾದವ್(2) ಕ್ರೀಸ್ ಕಾಯ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News