ಮೇ ವಿರುದ್ಧ ಅವರದೇ ಪಕ್ಷದ 40 ಸಂಸದರ ಬಂಡಾಯ?

Update: 2017-11-12 14:40 GMT

ಲಂಡನ್, ನ. 12: ಬ್ರಿಟಿಶ್ ಪ್ರಧಾನಿ ತೆರೇಸಾ ಮೇ ವಿರುದ್ಧದ ಅವಿಶ್ವಾಸ ಪತ್ರಕ್ಕೆ ಅವರ ಕನ್ಸರ್ವೇಟಿವ್ ಪಕ್ಷದ 40 ಸಂಸದರು ಸಹಿ ಹಾಕಲು ಒಪ್ಪಿದ್ದಾರೆ ಎಂದು ‘ಸಂಡೇ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.

ಈ ಸಂಖ್ಯೆಯು ಪಕ್ಷದ ನಾಯಕತ್ವ ಬದಲಾವಣೆಗೆ ಅಗತ್ಯವಾಗಿರುವ ಸಂಸದರ ಸಂಖ್ಯೆಗಿಂತ ಎಂಟು ಕಡಿಮೆಯಾಗಿದೆ.

ಜೂನ್ 8ರಂದು ನಡೆದ ಮಧ್ಯಾಂತರ ಚುನಾವಣೆಯ ಬಳಿಕ ಪಕ್ಷದ ಮೇಲೆ ಹಿಡಿತ ಸಾಧಿಸಲು ತೆರೇಸಾ ಮೇ ಪರದಾಡುತ್ತಿದ್ದಾರೆ. ಹೆಚ್ಚಿನ ಬಹುಮತದಿಂದ ಗೆಲ್ಲಬಹುದು ಎಂಬ ನಿರೀಕ್ಷೆಯಿಂದ ಅವರು ಈ ಚುನಾವಣೆಯನ್ನು ನಡೆಸಿದ್ದರು. ಆದರೆ, ಆ ಚುನಾವಣೆಯಲ್ಲಿ ಅವರು ತನ್ನ ಇರುವ ಬಹುಮತವನ್ನೂ ಕಳೆದುಕೊಂಡಿದ್ದಾರೆ.

ಐರೋಪ್ಯ ಒಕ್ಕೂಟದಿಂದ ಬ್ರಿಟನನ್ನು ಹೇಗೆ ಹೊರ ತರಬೇಕು ಎಂಬ ಬಗ್ಗೆ ಅಭಿಪ್ರಾಯ ಭೇದ ಹಾಗೂ ತನ್ನ ಸಚಿವರ ವಿವಿಧ ಹಗರಣಗಳ ಹಿನ್ನೆಲೆಯಲ್ಲಿ, ಮೇ ಸರಕಾರ ಅಸ್ತವ್ಯಸ್ತ ರಾಜಕೀಯ ಸ್ಥಿತಿಗತಿಯ ಮೇಲೆ ನಿಯಂತ್ರಣ ಹೇರುವಲ್ಲಿ ವಿಫಲವಾಗಿದೆ. ಇದು ಬ್ರೆಕ್ಸಿಟ್ (ಐರೋಪ್ಯ ಒಕ್ಕೂಟದಿಂದ ಬ್ರಿಟನ್ ನಿರ್ಗಮನ) ಮಾತುಕತೆಯಲ್ಲಿ ಲಂಡನ್‌ನ ಸ್ಥಿತಿಯನ್ನು ದುರ್ಬಲಗೊಳಿಸುತ್ತದೆ ಎನ್ನಲಾಗಿದೆ.

ಪಕ್ಷದ ವಾರ್ಷಿಕ ಸಮಾವೇಶದಲ್ಲಿ ಮಾಡಿದ ಅವಾಂತರಕಾರಿ ಭಾಷಣದ ಬಳಿಕ ಮೇಯವರನ್ನು ಪದಚ್ಯುತಗೊಳಿಸಲು ನಡೆದ ಪ್ರಯತ್ನಗಳು ವಿಫಲಗೊಂಡವಾದರೂ, ಹೆಚ್ಚಿನ ಪಕ್ಷೀಯರು ಪ್ರಧಾನಿಯ ನಿರ್ವಹಣೆ ಬಗ್ಗೆ ಅತೃಪ್ತಿ ಹೊಂದಿದ್ದಾರೆ. ಹಾಗಾಗಿ, ನಾಯಕತ್ವ ಬದಲಾವಣೆಯ ವಿಷಯ ಮುಕ್ತಾಯಗೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News