ಟ್ರಂಪ್, ವಿಶ್ವ ನಾಯಕರ ಭೇಟಿಯಾದ ಮೋದಿ

Update: 2017-11-12 15:38 GMT

ಮನಿಲಾ (ಫಿಲಿಪ್ಪೀನ್ಸ್), ನ. 12: ಎರಡು ಮಹತ್ವದ ಶೃಂಗ ಸಮ್ಮೇಳನಗಳಲ್ಲಿ ಭಾಗವಹಿಸಲು ಮೂರು ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ರವಿವಾರ ಫಿಲಿಪ್ಪೀನ್ಸ್ ರಾಜಧಾನಿ ಮನಿಲಾಕ್ಕೆ ಆಗಮಿಸಿದ್ದಾರೆ.

ಈ ಸಂದರ್ಭದಲ್ಲಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವಾರು ಜಾಗತಿಕ ನಾಯಕರನ್ನು ಭೇಟಿಯಾದರು.

ಮೋದಿಯ ಮನಿಲಾ ಭೇಟಿಯ ಕಾರ್ಯಸೂಚಿಯಲ್ಲಿ ಭಯೋತ್ಪಾದನೆ ಮತ್ತು ವ್ಯಾಪಾರ ಸಂಬಂಧಿತ ವಿಷಯಗಳು ಪ್ರಾಮುಖ್ಯತೆ ಪಡೆದುಕೊಂಡಿವೆ.

ಮನಿಲಾ ತಲುಪಿದ ಮೋದಿ ರಶ್ಯ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಮತ್ತು ಚೀನಾ ಪ್ರಧಾನಿ ಲಿ ಕೆಕಿಯಾಂಗ್‌ರನ್ನೂ ಭೇಟಿಯಾದರು.

ಮೋದಿ ನವೆಂಬರ್ 14ರಂದು ನಡೆಯಲಿರುವ 15ನೆ ಆಸಿಯಾನ್ (ಆಗ್ನೇಯ ಏಶ್ಯ ದೇಶಗಳ ಒಕ್ಕೂಟ)-ಭಾರತ ಶೃಂಗ ಸಮ್ಮೇಳನ ಮತ್ತು 12ನೆ ಪೂರ್ವ ಏಶ್ಯ ಶೃಂಗ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ತನ್ನ ಭೇಟಿಯ ಅವಧಿಯಲ್ಲಿ ಮೋದಿ ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ಜೊತೆಗೂ ಮಾತುಕತೆ ನಡೆಸುವ ನಿರೀಕ್ಷೆಯಿದೆ.

 ‘‘ಪ್ರಧಾನಿ ಮೋದಿ ಫಿಲಿಪ್ಪೀನ್ಸ್‌ಗೆ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ. ಇದು ಅವರು ಮತ್ತು ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ನಡುವಿನ ಮೊದಲ ಮಹತ್ವದ ಭೇಟಿಯಾಗಿರುತ್ತದೆ’’ ಎಂದು ಫಿಲಿಪ್ಪೀನ್ಸ್‌ಗೆ ಭಾರತದ ರಾಯಭಾರಿ ಜೈದೀಪ್ ಮಝುಂದಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News