ನಾನು ಸೌದಿಯಲ್ಲಿ ಸ್ವತಂತ್ರನಾಗಿದ್ದೇನೆ, ಶೀಘ್ರ ಲೆಬನಾನ್ ಗೆ ವಾಪಸಾಗುವೆ: ಸಆದ್ ಹರೀರಿ

Update: 2017-11-13 15:29 GMT

 ಬೆರೂತ್ (ಲೆಬನಾನ್), ನ. 13: ಸೌದಿ ಅರೇಬಿಯ ಪ್ರವಾಸದಲ್ಲಿದ್ದ ವೇಳೆ ತನ್ನ ಅನಿರೀಕ್ಷಿತ ರಾಜೀನಾಮೆಯನ್ನು ಘೋಷಿಸಿ ವಲಯದಲ್ಲಿ ಕೋಲಾಹಲವನ್ನು ಎಬ್ಬಿಸಿರುವ ಲೆಬನಾನ್ ಪ್ರಧಾನಿ ಸಾದ್ ಹರೀರಿ, ತಾನು ಸೌದಿ ಅರೇಬಿಯದಲ್ಲಿ ‘ಸ್ವತಂತ್ರ’ವಾಗಿದ್ದೇನೆ ಹಾಗೂ ‘ಶೀಘ್ರವೇ’ ಸ್ವದೇಶಕ್ಕೆ ಹಿಂದಿರುಗುತ್ತೇನೆ ಎಂದು ರವಿವಾರ ಹೇಳಿದ್ದಾರೆ.

ತನ್ನ ಪಕ್ಷದ ‘ಫ್ಯೂಚರ್ ಟಿವಿ’ಗೆ ರಿಯಾದ್‌ನಿಂದ ಸಂದರ್ಶನವೊಂದನ್ನು ನೀಡಿದ ಹರೀರಿ, ಸೌದಿ ಅರೇಬಿಯದಲ್ಲಿ ತಾನು ಗೃಹಬಂಧನದಲ್ಲಿದ್ದೇನೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿದರು.

‘‘ನಾನು ಇಲ್ಲಿ ಸ್ವತಂತ್ರವಾಗಿದ್ದೇನೆ. ನಾಳೆ ನಾನು ಹೊರಡಬೇಕೆಂದರೆ, ನಾನು ಹೊರಡಬಹುದು’’ ಎಂದು ಅವರು ನುಡಿದರು.

‘‘ನಾನು ಲೆಬನಾನ್‌ಗೆ ಶೀಘ್ರವೇ ಮರಳುತ್ತೇನೆ’’ ಎಂದು ಹೇಳಿದ ಅವರು, ‘‘ಎರಡು ಅಥವಾ ಮೂರು ದಿನಗಳಲ್ಲಿ ನಾನು ಬೆರೂತ್‌ನಲ್ಲಿ ಬಂದಿಳಿಯುತ್ತೇನೆ” ಎಂದು ಬಳಿಕ ನುಡಿದರು.

ನವೆಂಬರ್ 4ರಂದು ರಿಯಾದ್‌ನಿಂದ ಟೆಲಿವಿಶನ್ ಭಾಷಣ ಮಾಡಿದ 47 ವರ್ಷದ ಹರೀರಿ, ಪ್ರಧಾನಿ ಹುದ್ದೆಗೆ ರಾಜೀನಾಮೆ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ. ಆ ಬಳಿಕ ಅವರು ಸೌದಿ ಅರೇಬಿಯದಲ್ಲೇ ನೆಲೆಸಿದ್ದಾರೆ.

ಅದೇ ವೇಳೆ, ಲೆಬನಾನ್ ಅಧ್ಯಕ್ಷ ಮೈಕಲ್ ಅವುನ್, ಪ್ರಧಾನಿ ರಾಜೀನಾಮೆಯನ್ನು ಈವರೆಗೂ ಅಂಗೀಕರಿಸಿಲ್ಲ. ಪ್ರಧಾನಿಯ ಚಲನವಲನಗಳನ್ನು ನಿಯಂತ್ರಿಸಲಾಗಿದೆ ಎಂದು ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ ಹಾಗೂ ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆಯೂ ಅವರು ಸೌದಿ ಅರೇಬಿಯವನ್ನೂ ಕೋರಿದ್ದಾರೆ.

ಸೌದಿ ಅರೇಬಿಯ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚಿದ ನಡುವೆಯೇ ಹರೀರಿ ತನ್ನ ಅನಿರೀಕ್ಷಿತ ರಾಜೀನಾಮೆ ಘೋಷಿಸಿರುವುದು ಮಹತ್ವವನ್ನು ಪಡೆದುಕೊಂಡಿದೆ. ಲೆಬನಾನ್, ಸಿರಿಯದಿಂದ ಹಿಡಿದು ಯಮನ್‌ವರೆಗಿನ ರಾಜಕೀಯ ಮೇಲಾಟದಲ್ಲಿ ಈ ಎರಡು ದೇಶಗಳು ವಿರುದ್ಧ ಬಣಗಳನ್ನು ಬೆಂಬಲಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News