ಪಾಕ್ ಸ್ಪಿನ್ನರ್ ಅಜ್ಮಲ್ ಕ್ರಿಕೆಟಿಗೆ ಗುಡ್ ಬೈ

Update: 2017-11-13 18:28 GMT

ಕರಾಚಿ, ನ.13: ಪಾಕಿಸ್ತಾನದ ಸ್ಪಿನ್ ಬೌಲರ್ ಸಯೀದ್ ಅಜ್ಮಲ್ ಸೋಮವಾರ ಎಲ್ಲ ಪ್ರಕಾರದ ಕ್ರಿಕೆಟ್‌ನಿಂದ ಸೋಮವಾರ ನಿವೃತ್ತಿ ಘೋಷಿಸಿದರು.

ಅಜ್ಮಲ್ ಒಂದು ಕಾಲದಲ್ಲಿ ಏಕದಿನ ಹಾಗೂ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಂ.1 ಬೌಲರ್ ಆಗಿದ್ದರು. ಟೆಸ್ಟ್‌ನಲ್ಲಿ ಯಶಸ್ವಿ ಬೌಲರ್ ಆಗಿದ್ದವರು. 2012ರಲ್ಲಿ ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್‌ನಲ್ಲಿ 24 ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ 55 ರನ್‌ಗೆ 5 ವಿಕೆಟ್ ಪಡೆದು ಜೀವನಶ್ರೇಷ್ಠ ಬೌಲಿಂಗ್ ಮಾಡಿದ್ದರು.

ಶಂಕಾಸ್ಪದ ಶೈಲಿಯ ಬೌಲಿಂಗ್ ಆರೋಪಕ್ಕೆ ಒಳಗಾಗಿದ್ದ ಅಜ್ಮಲ್ ತನ್ನ ಬೌಲಿಂಗ್ ಶೈಲಿ ಬದಲಿಸಿಕೊಂಡರೂ ಮೊದಲಿನ ಲಯ ಕಂಡುಕೊಳ್ಳಲು ವಿಫಲರಾಗಿದ್ದರು.

2015ರಲ್ಲಿ ಕ್ರಿಕೆಟ್‌ಗೆ ವಾಪಸಾಗಿದ್ದ ಅಜ್ಮಲ್ ಬಾಂಗ್ಲಾದೇಶ ವಿರುದ್ಧ 2 ಏಕದಿನ ಹಾಗೂ ಟ್ವೆಂಟಿ-20ಯಲ್ಲಿ ಕೇವಲ 1 ವಿಕೆಟ್ ಪಡೆದಿದ್ದರು. ಆಬಳಿಕ ಮತ್ತೊಮ್ಮೆ ತಂಡಕ್ಕೆ ಆಯ್ಕೆಯಾಗಲಿಲ್ಲ.

‘‘ಪ್ರಸ್ತುತ ನ್ಯಾಶನಲ್ ಕ್ರಿಕೆಟ್ ಟೂರ್ನಿಯ ಬಳಿಕ ಎಲ್ಲ ಮಾದರಿ ಕ್ರಿಕೆಟ್‌ನಿಂದ ನಿವೃತ್ತಿಯಾಗುವೆ. ನಾನು ನಿಗದಿಪಡಿಸಿದ ಎಲ್ಲ ಗುರಿ ಸಾಧಿಸಿ ತಂಡ ಗೆಲುವಿಗೆ ನೆರವಾದ ತೃಪ್ತಿ ನನಗಿದೆ’’ ಎಂದು 40ರ ಹರೆಯದ ಅಜ್ಮಲ್ ಹೇಳಿದ್ದಾರೆ. 2014ರಲ್ಲಿ ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಟೆಸ್ಟ್ ಆಡಿರುವ ಅಜ್ಮಲ್ 35 ಟೆಸ್ಟ್ ಗಳಲ್ಲಿ 178 ವಿಕೆಟ್ ಕಬಳಿಸಿದ್ದರು. 113 ಏಕದಿನಗಳಲ್ಲಿ 184 ವಿಕೆಟ್ ಹಾಗೂ 64 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 85 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News