ಜಿಎಸ್‌ಟಿ: ಇದೆ ಇನ್ನಷ್ಟು ಸಿಹಿಸುದ್ದಿ!

Update: 2017-11-14 03:50 GMT

ಹೊಸದಿಲ್ಲಿ, ನ.14: ಇನ್ನಷ್ಟು ಸರಕುಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿತಗೊಳಿಸುವ ಸುಳಿವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ವ್ಯಕ್ತಪಡಿಸಿದ್ದಾರೆ. ಜಿಎಸ್‌ಟಿ ದರವನ್ನು ಮತ್ತಷ್ಟು ತಾರ್ಕಿಕಗೊಳಿಸಲು ಸರ್ಕಾರ ಯೋಚಿಸುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಏಕ ತೆರಿಗೆ ವ್ಯವಸ್ಥೆಯನ್ನು ವಿರೋಧಿಸುತ್ತಿರುವ ವಿರೋಧ ಪಕ್ಷಗಳ ಮೇಲೆ ಜೇಟ್ಲಿ ವಾಗ್ದಾಳಿ ನಡೆಸಿದ್ದಾರೆ.
"ಜಿಎಸ್‌ಟಿ ದರವನ್ನು ತಾರ್ಕಿಕಗೊಳಿಸುವ ಹಂತ ಮುಂದುವರಿಯಲಿದೆ. ಇಂಥ ಕ್ರಮ ಮುಂದಿನ ಆದಾಯಕ್ಕೆ ಅನುಸಾರವಾಗಿ ಇರುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ. ಜೇಟ್ಲಿ ನೇತೃತ್ವದ ಜಿಎಸ್‌ಟಿ ಮಂಡಳಿ ಕಳೆದ ಶುಕ್ರವಾರ 200 ವಸ್ತುಗಳ ತೆರಿಗೆ ದರವನ್ನು ಕಡಿತಗೊಳಿಸಿತ್ತು. 176 ವಸ್ತುಗಳ ತೆರಿಗೆ ದರವನ್ನು ಶೇಕಡ 28ರಿಂದ 18ಕ್ಕೆ ಇಳಿಸಿದ್ದು, ಗರಿಷ್ಠ ತೆರಿಗೆ ಹಂತದಲ್ಲಿ ಕೇವಲ 50 ಸರಕುಗಳು ಮಾತ್ರ ಉಳಿದಿವೆ. ಈ ದರವನ್ನು ಶೇಕಡ 18ರಿಂದ 12ಕ್ಕೆ ಇಳಿಸುವ ಬಗ್ಗೆ ಕೂಡಾ ಚಿಂತನೆ ನಡೆದಿದೆ ಎಂದು ಹಲವು ರಾಜ್ಯಗಳ ಹಣಕಾಸು ಸಚಿವರು ಸುಳಿವು ನೀಡಿದ್ದಾರೆ.

ಎಲ್ಲ ಸರಕುಗಳ ಮೇಲೆ ಏಕ ದರದ ತೆರಿಗೆ ವಿಧಿಸಬೇಕು ಎಂಬ ರಾಹುಲ್‌ ಗಾಂಧಿ ಆಗ್ರಹವನ್ನು ಉಲ್ಲೇಖಿಸಿದ ಸಚಿವರು, "ಏಕದರದ ತೆರಿಗೆಗೆ ಆಗ್ರಹಿಸುತ್ತಿರುವವರು ಈ ತೆರಿಗೆ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡಿಲ್ಲ ಎನ್ನುವುದು ಸ್ಪಷ್ಟ. ಅವರಿಗೆ ಜಿಎಸ್‌ಟಿ ಬಗ್ಗೆ ಪ್ರಾಥಮಿಕ ಜ್ಞಾನವೂ ಇಲ್ಲ" ಎಂದು ತಿರುಗೇಟು ನೀಡಿದರು. ಜಿಎಸ್‌ಟಿ ವ್ಯವಸ್ಥೆ ಹಣದುಬ್ಬರವನ್ನು ತಗ್ಗಿಸಿದೆ ಎಂದು ಸಚಿವರು ಸಮರ್ಥಿಸಿಕೊಂಡರು.

ಶೇವಿಂಗ್ ಬ್ಲೇಡ್‌ನಿಂದ ಹಿಡಿದು ವಾಷಿಂಗ್ ಪೌಡರ್‌ವರೆಗಿನ ದಿನಬಳಕೆ ವಸ್ತುಗಳ ಮೇಲೆ ಮಾಡಿರುವ ತೆರಿಗೆ ದರ ಕಡಿತದ ಲಾಭ ಗ್ರಾಹಕರಿಗೆ ದೊರಕುವಂತಾಗಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News