ಅವರ ‘ಸಾಧನೆ’ಯ ಬಗ್ಗೆ ಅವರಿಗೇ ನಂಬಿಕೆಯಿಲ್ಲವೇ?

Update: 2017-11-14 18:39 GMT

ಮಾನ್ಯರೆ,

ಅಧಿಕಾರದಲ್ಲಿರುವ ಯಾವುದೇ ಒಬ್ಬ ರಾಜಕೀಯ ವ್ಯಕ್ತಿ ಅಥವಾ ಪಕ್ಷವು, ಜನರ ಆವಶ್ಯಕತೆಗಳನ್ನು ಪೂರೈಸಿ ಅವರ ಆಶೋತ್ತರಗಳನ್ನು ಈಡೇರಿಸಿದ್ದರೆ, ಅವರ ಹಸಿವನ್ನು ನೀಗಿಸಿದ್ದರೆ, ಅವರ ಕೈಗಳಿಗೆ ಉದ್ಯೋಗ ಕೊಟ್ಟಿದ್ದರೆ, ಅವರ ಬದುಕಿಗೆ ಭದ್ರತೆ ಒದಗಿಸಿ ಸಮೃದ್ಧ ಮತ್ತು ಸಂಯಮದ ಸಮಾಜವನ್ನು ನಿರ್ಮಾಣ ಮಾಡಿದ್ದರೆ, ಯಾವುದೇ ಚುನಾವಣೆಯಲ್ಲಿ ಆ ವ್ಯಕ್ತಿ ಅಥವಾ ಅವರು ಪ್ರತಿನಿಧಿಸುವ ಪಕ್ಷವನ್ನು ಜನತೆ ಖಂಡಿತ ಕೈ ಬಿಡಲಾರರು. ಆದರೆ ಹಾಗೆ ಮಾಡದಿದ್ದರೆ ಅಂತಹ ವ್ಯಕ್ತಿ, ಪಕ್ಷಗಳಿಗೆ ಪ್ರಚಾರ ಬೇಕಾಗುತ್ತದೆ. ಕೇವಲ ಮತ್ತೆ ಮತ್ತೆ ಆಶ್ವಾಸನೆ ಕೊಡುವುದರ ಮೂಲಕ ಗೆಲ್ಲಲು ಪ್ರಯತ್ನಿಸಬೇಕಾಗುತ್ತದೆ.
ಗುಜರಾತ್‌ನಲ್ಲಿ ಕಳೆದ ಎರಡು ದಶಕಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿಯವರಿಗೆ ಆ ರಾಜ್ಯ ಆರ್ಥಿಕತೆಯಲ್ಲಿ ಸದೃಢವಾಗಿ, ಕೈಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿ, ನಿರುದ್ಯೋಗ ನಿವಾರಣೆಯಾಗಿ, ಹಸಿವು ಮಾಯವಾಗಿ, ಭಯಮುಕ್ತ ಸಮಾಜ ನಿರ್ಮಾಣವಾಗಿದ್ದರೆ, ನಮ್ಮ ಪ್ರಧಾನಿಗಳೇಕೆ ಪ್ರತೀ ವಾರದಲ್ಲಿ ಎರೆಡೆರಡು ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿ ತಮ್ಮ ಸಾಧನೆಯನ್ನು ತಾವೇ ಹೇಳಿಕೊಳ್ಳಬೇಕು?
 ನೆಹರೂರವರು ಈ ದೇಶದ ಪ್ರಧಾನಿಯಾಗಿದ್ದರು. ಅವರು ಯಾವುದೇ ರಾಜ್ಯಗಳ ಚುನಾವಣೆ ನಡೆದಾಗ ಈ ರೀತಿಯಲ್ಲಿ ಪ್ರವಾಸ ಮಾಡಿದ ಉದಾಹರಣೆಗಳಿಲ್ಲ. ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ವಿಧಾನ ಸಭಾ ಚುನಾವಣೆಗಳು ನಡೆದಾಗ ಒಂದು ರಾಜ್ಯದಲ್ಲಿ ಒಂದು ಅಥವಾ ಎರಡಕ್ಕಿಂತ ಹೆಚ್ಚಿನ ಸಭೆಗಳನ್ನು ನಡೆಸಿದ ಉದಾಹರಣೆಗಳಿಲ್ಲ. ಆದರೆ ನಮ್ಮ ಈಗಿನ ಪ್ರಧಾನಿಗಳು ಯಾವುದೇ ರಾಜ್ಯದಲ್ಲಿ ಚುನಾವಣೆಯಾದರೂ ಸ್ಥಳೀಯ ನಾಯಕರು ಭಾಗವಹಿಸುವ ರ್ಯಾಲಿಗಳಿಗಿಂತ ಹೆಚ್ಚಿನ ರ್ಯಾಲಿಗಳಲ್ಲಿ ಅವರು ಭಾಗವಹಿಸುವುದು ಕಂಡು ಬರುತ್ತಿದೆ.
ತಾವು 32 ರಾಜ್ಯಗಳ ಪ್ರಧಾನಿ, 130 ಕೋಟಿ ಜನತೆಯ ಪ್ರತಿನಿಧಿ ಎಂಬುದನ್ನು ಮರೆತು ಗುಜರಾತ್‌ನಲ್ಲಿ ಚುನಾವಣೆ ಗೆಲ್ಲಲೇ ಬೇಕೆಂಬ ಹಠದಿಂದ ಪದೇ ಪದೇ ಅಲ್ಲಿಗೆ ಭೇಟಿ ನೀಡುತ್ತಿರುವುದನ್ನು ನೋಡಿದಾಗ ಅವರ ‘ಸಾಧನೆ’ಯ ಬಗ್ಗೆ ಅವರಿಗೇ ನಂಬಿಕೆಯಿಲ್ಲವೆಂದು ಕಾಣುತ್ತಿದೆ.
 

Similar News