ಪ್ರವಾಸಿಸ್ನೇಹಿ ಪರಿಸರ: ಗೋವಾವನ್ನು ಹಿಂದಿಕ್ಕಿದ ದಿಲ್ಲಿ

Update: 2017-11-15 04:15 GMT

ಹೊಸದಿಲ್ಲಿ, ನ.15: ಕಳೆದ ಒಂದು ವಾರದಿಂದ ಮಾಲಿನ್ಯದ ಕರಿನೆರಳಿನಲ್ಲಿ ಸಿಕ್ಕಿಹಾಕಿಕೊಂಡಿರುವ ದಿಲ್ಲಿಗೆ ಖುಷಿಪಡುವಂಥ ಸಂಗತಿಯೊಂದು ಹೊರಬಿದ್ದಿದೆ. ದೇಶದ 30 ರಾಜ್ಯಗಳ ಪೈಕಿ ಪ್ರಯಾಣ ಹಾಗೂ ಪ್ರವಾಸದ ಸ್ಪರ್ಧಾತ್ಮಕತೆ ರ್ಯಾಂಕಿಂಗ್‌ನಲ್ಲಿ ದೇಶದ ರಾಜಧಾನಿ ಅಗ್ರಸ್ಥಾನದಲ್ಲಿದೆ.

ಈ ದ್ವೈವಾರ್ಷಿಕ ರಾಜ್ಯ ರ್ಯಾಂಕಿಂಗ್ ಸಮೀಕ್ಷೆ ವರದಿಯನ್ನು ವಿಶ್ವ ಪ್ರಯಾಣ ಮತ್ತು ಪ್ರವಾಸೋದ್ಯಮ ಮಂಡಳಿಯ ಭಾರತ ಯೋಜನೆ ವಿಭಾಗ ಮತ್ತು ಹೊಟೆಲಿವೇಟ್ ಬಿಡುಗಡೆ ಮಾಡಿದೆ. ಇದು 11 ಮಾನದಂಡಗಳಿಗಳಿಗೆ ಅನುಗುಣವಾಗಿ ಪ್ರತಿ ರಾಜ್ಯದ ಕ್ಷಮತೆಯನ್ನು ಅಳೆಯುತ್ತದೆ.

ಮಹಾರಾಷ್ಟ್ರ ಹಾಗೂ ಗೋವಾವವನ್ನು ಎರಡನೇ ಸ್ಥಾನಕ್ಕೆ ತಳ್ಳಿ ದಿಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ತಮಿಳುನಾಡು, ಗುಜರಾತ್, ಕೇರಳ, ಪಶ್ಚಿಮ ಬಂಗಾಳ, ಪಂಜಾಬ್ ಹಾಗೂ ಆಂಧ್ರಪ್ರದೇಶ ಅಗ್ರ 10ರಲ್ಲಿ ಸ್ಥಾನ ಪಡೆದಿವೆ. 30 ರಾಜ್ಯಗಳ ಪೈಕಿ ಈಶಾನ್ಯ ರಾಜ್ಯಗಳು ರೈಲು ಮತ್ತು ವಿಮಾನದ ಸಂಪರ್ಕ ಕೊರತೆಯಿಂದಾಗಿ ಈ ನಿಟ್ಟಿನಲ್ಲಿ ಹಿಂದೆಬಿದ್ದಿವೆ. ಸಮೀಕ್ಷೆಯ ಡೆಸ್ಟಿನೇಶನ್ ಲೀಡರ್ ಪ್ರಶಸ್ತಿಗೆ ಕೂಡಾ ದಿಲ್ಲಿ ಪಾತ್ರವಾಗಿದೆ.

ರಾಜ್ಯಗಳು ಪ್ರವಾಸೋದ್ಯಮಕ್ಕೆ ಮಾಡುವ ವೆಚ್ಚ, ಪ್ರವಾಸಿಗಳ ಆಗಮನ, ರಾಜ್ಯಗಳ ತಲಾ ಜಿಡಿಪಿ, ಬ್ರಾಂಡೆಡ್ ಹೋಟೆಲ್‌ಗಳ ಕೊಠಡಿ ಲಭ್ಯತೆ, ಮಾರುಕಟ್ಟೆ ಪ್ರಚಾರದ ಪರಿಣಾಮ, ನಗರೀಕರಣದ ಪ್ರಮಾಣ, ವಿಮಾನ, ರೈಲು ಮತ್ತು ರಸ್ತೆ ಮೂಲಸೌಕರ್ಯ, ವಹಿವಾಟು ನಡೆಸಲು ಇರುವ ಅನುಕೂಲಕರ ವಾತಾವರಣ, ಸಾಕ್ಷರತೆ ಪ್ರಮಾಣ ಹಾಗೂ ಅದೃಶ್ಯ ಅಂಶಗಳನ್ನು ಕೂಡಾ ಇದು ಪರಿಗಣಿಸಿದೆ.

ದಿಲ್ಲಿ ಕಳೆದ ಬಾರಿಗಿಂತ ತನ್ನ ಸಾಧನೆಯನ್ನು ಉತ್ತಮಪಡಿಸಿಕೊಂಡಿದ್ದು, 11 ಮಾನದಂಡಗಳ ಪೈಕಿ 5ರಲ್ಲಿ ಅಗ್ರಸ್ಥಾನಿಯಾಗಿದೆ. ಆದರೆ ವಹಿವಾಟು ನಡೆಸಲು ಇರುವ ಅನುಕೂಲಕರ ವಾತಾವರಣ, ರಾಜ್ಯದ ಪ್ರವಾಸೋದ್ಯಮ ವೆಚ್ಚ ಹಾಗೂ ಪರಿಣಾಮಕಾರಿ ಮಾರುಕಟ್ಟೆ ಅಭಿಯಾನದಲ್ಲಿ ಇದು ಹಿಂದೆ ಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News