ಹೊಟೇಲ್ ಮಾಲಕನಿಗೆ ಥಳಿಸಿದ ಎಸಿಪಿ
ಬೆಂಗಳೂರು, ನ.15: ತಡರಾತ್ರಿಯವರೆಗೂ ಹೊಟೇಲ್ ಮುಚ್ಚದೇ ವ್ಯವಹಾರ ಮಾಡುತ್ತಿದ್ದ ಹೊಟೇಲ್ ಮಾಲಕನಿಗೆ ಪೊಲೀಸ್ ಎಸಿಪಿಯೊಬ್ಬರು ಲಾಠಿಯಿಂದ ಥಳಿಸಿರುವ ಸಿಸಿಟಿವಿ ದೃಶ್ಯಗಳು ಬಹಿರಂಗಗೊಂಡಿವೆ.
ಆರ್.ಟಿ.ನಗರದ ದಿಣ್ಣೂರ ರಸ್ತೆಯಲ್ಲಿ ಮಧ್ಯರಾತ್ರಿ 12 ಗಂಟೆ ಸಮೀಪಿಸುತ್ತಿದ್ದರೂ ಹೊಟೇಲ್ ಬಾಗಿಲು ಮುಚ್ಚದೇ ವ್ಯಾಪಾರ ನಡೆಸುತ್ತಿದ್ದ ಎಂದು ಆರೋಪಿಸಿ ಹೊಟೇಲ್ ಮಾಲಕನನ್ನು ಆರ್.ಟಿ.ನಗರ ಎಸಿಪಿ ಮಂಜುನಾಥ ಬಾಬು ಥಳಿಸಿದ್ದಾರೆ ಎಂದು ತಿಳಿದು ಬಂದಿದೆ.
ದಿಣ್ಣೂರ ರಸ್ತೆಯಲ್ಲಿರುವ ಶೆಟ್ಟಿ ಲಂಚ್ ಹೋಂ ಹೊಟೇಲ್‌ನ್ನು ನ.9ರ ಗುರುವಾರ ದಂದು ರಾತ್ರಿ 11:55 ಗಂಟೆಯಾಗಿದ್ದರೂ ತೆಗೆದು ವ್ಯಾಪಾರ ನಡೆಸಲಾಗುತ್ತಿತ್ತು. ಅಲ್ಲಿಗೆ ಬಂದ ಆರ್.ಟಿ.ನಗರ ಎಸಿಪಿ ಮಂಜುನಾಥ ಬಾಬು ಅವರು ಹೊಟೇಲ್ ಬಾಗಿಲು ಮುಚ್ಚುವಂತೆ ಮಾಲಕನಿಗೆ ಸೂಚಿಸಿದರಾದರೂ ಆತ ಪ್ರತಿರೋಧ ತೋರಿದ್ದರಿಂದ ಲಾಠಿಯಿಂದ ಥಳಿಸಿದ್ದಾರೆ ಎನ್ನಲಾಗಿದ್ದು, ಮಾಲಕ ರಾಜೀವ ಶೆಟ್ಟಿ ಅವರಿಗೆ ಲಾಠಿಯಿಂದ ಹೊಡೆಯುತ್ತಿರುವ ದೃಶ್ಯಗಳು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಪೊಲೀಸರ ದೌರ್ಜನ್ಯ ಕಂಡು ಲಂಚ್ ಹೋಂನಲ್ಲಿದ್ದ ಗ್ರಾಹಕರು ಭಯ ಭೀತಗೊಂಡು ಓಡಿ ಹೋಗಿದ್ದು, ನಾನು ಬಾಗಿಲು ಮುಚ್ಚುತ್ತೇನೆ ಎಂದು ಹೇಳಿದರೂ ಮಂಜುನಾಥ್ ಲಾಟಿಯಿಂದ ಮನಬಂದಂತೆ ಥಳಿಸಿದ್ದಾರೆ ಎಂದು ರಾಜೀವ ಶೆಟ್ಟಿ ದೂರಿದ್ದಾರೆ.